ಬೇಗ ಎದ್ದು ಅಭ್ಯಾಸಕ್ಕಾಗಿ ರೆಡಿಯಾದೆ. ಆಮೇಲೆ ಗೊತ್ತಾಯ್ತು ನಾನು ನಿವೃತ್ತಿ ಪಡೆದಿದ್ದೇನೆ ಎಂದು : ಸಚಿನ್‌

ಸೋಮವಾರ, 18 ನವೆಂಬರ್ 2013 (18:36 IST)
PTI
PTI
ಎಂದಿನಂತೆ ನಾನು ಬೆಳಿಗ್ಗೆ ಬೇಗ ಎದ್ದು ಕ್ರಿಕೆಟ್‌ ಅಭ್ಯಾಸಕ್ಕಾಗಿ ತಯಾರಾಗಿಬಿಟ್ಟಿದ್ದೆ. ಇನ್ನೇನು ಮನೆಯಿಂದ ಹೊರಗೆ ಬರಬೇಕು ಎಂದಾಗ ನನಗೆ ಗೊತ್ತಾಯ್ತು ನಾನು ನೆನ್ನೆಯೇ ನಿವೃತ್ತಿ ಪಡೆದಿದ್ದೇನೆ ಎಂದು. ಕ್ರಿಕೆಟ್‌ಗೆ ಒಗ್ಗಿಕೊಂಡಿದ್ದ ನನ್ನ ಬದುಕು ಕ್ರಿಕೆಟ್‌ ನಿವೃತ್ತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಒಗ್ಗಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಲಿಟಲ್‌ ಮಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಹೇಳಿದ್ರು.

ಬದುಕಿನ ಬಹಳಷ್ಟು ಭಾಗವನ್ನು ಕ್ರಿಕೆಟ್‌ನಲ್ಲಿಯೇ ಕಳೆದ ಸಚಿನ್ ತೆಂಡೂಲ್ಕರ್‌ ಅವರಿಗೆ ಮನೆಯ ಪರಿಸರಕ್ಕೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿದೆ. ಹೀಗಾಗಿ ನಿವೃತ್ತಿ ಪಡೆದ ಮೊದಲ ದಿನವೇ ಬೆಳಿಗ್ಗೆ ಎದ್ದು ಕ್ರಿಕೆಟ್‌ ಅಭ್ಯಾಸಕ್ಕೆ ತಯಾರಾಗಲು ಮುಂದಾದರಂತೆ. ನಂತರ ಅವರು ನಿವೃತ್ತಿ ಪಡೆದಿದ್ದು ನೆನಪಾಗಿ ಸುಮ್ಮನಾಗಿಬಿಟ್ಟರಂತೆ.

ಮೊದಲ ದಿನವನ್ನು ಪತ್ನಿಯ ಜೊತೆಗೆ ಪ್ರೀತಿಯಿಂದ ಕಳೆದ ಸಚಿನ್ ತೆಂಡೂಲ್ಕರ್‌, ಅವರೇ ಅಂಜಲಿಗೆ ಟೀ ಮಾಡಿ ಕೊಟ್ಟರಂತೆ. ಅಷ್ಟೆ ಅಲ್ಲ ಶಿವಾಜಿ ಪಾರ್ಕಿನಲ್ಲಿ ಇರುವ ಅವರ ಚಿಕ್ಕಮ್ಮನ ಮನೆಗೆ ಸಚಿನ್‌ ಕುಟುಂಬ ಸಮೇತರಾಗಿ ಹೋಗಿ ಭೇಟಿ ಮಾಡಿದ್ದಾರೆ. ಕುಟುಂಬದ ಜೊತೆಗೆ ಟಿಫಿನ್‌ ಮಾಡಿದ್ದಾರೆ. ಆದ್ರೆ ಹಿಂದಿನ ಭೋಜನಕ್ಕಿಂತ ಇಂದಿನ ಭೋಜನ ಏನೋ ವಿಶೇಷತೆಯಿಂದ ಕೂಡಿತ್ತು ಎಂದು ಸಚಿನ್‌ ಹೇಳಿದ್ರು.

ಕ್ರಿಕೆಟ್‌ ನನ್ನ ಉಸಿರಾಗಿತ್ತು. ಆದ್ರೆ ಇದೀಗ ಆ ಉಸಿರನ್ನು ಬಿಟ್ಟು ಬೇರೊಂದು ಬದುಕಿಗೆ ಬಲವಂತವಾಗಿ ಒಗ್ಗಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು ಸಚಿನ್ ತೆಂಡೂಲ್ಕರ್‌.

ವೆಬ್ದುನಿಯಾವನ್ನು ಓದಿ