ಭಜ್ಜಿ, ರೈನಾ, ಶ್ರೀಶಾಂತ್‌ಗೆ ಕೊಕ್; ಹಿರಿಯರ ಪುನರಾಗಮನ

ಶನಿವಾರ, 29 ಅಕ್ಟೋಬರ್ 2011 (10:07 IST)
PTI


ವೆಸ್ಟ್‌ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಗಾಗಿನ ಟೀಮ್ ಇಂಡಿಯಾವನ್ನು ಘೋಷಿಸಲಾಗಿದ್ದು, ಎಂದಿನಂತೆ ಕೆಲವು ಅಚ್ಚರಿಯ ನಿರ್ಧಾರಗಳನ್ನು ಪ್ರಕಟಿಸಿರುವ ಕೃಷ್ಣಮಾಚಾರಿ ಶ್ರೀಕಾಂತ್ ಆಯ್ಕೆ ಸಮಿತಿಯು ಅನುಭವಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಆಲ್‌ರೌಂಡರ್ ಸುರೇಶ್ ರೈನಾ ಹಾಗೂ ಟೆಪರ್‌ಮೆಂಟ್ ವೇಗಿ ಎಸ್. ಶ್ರೀಶಾಂತ್ ಅವರಿಗೆ ಕೊಕ್ ನೀಡಿದೆ.

ಅದೇ ಹೊತ್ತಿಗೆ 15 ಮಂದಿ ಸದಸ್ಯರ ತಂಡದಲ್ಲಿ ಮೂವರು ಹೊಸಮುಖಗಳು ಕಾಣಿಸಿಕೊಂಡಿದ್ದು, ಲೆಗ್ ಸ್ಪಿನ್ನರ್ ರಾಹುಲ್ ಶರ್ಮಾ, ಭರವಸೆಯ ಯುವ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಮತ್ತು ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ.

ಗಾಯದಿಂದಾಗಿ ಕಳೆದ ಹಲವು ಸಮಯಗಳಿಂದ ವಿಶ್ರಾಂತಿಯಲ್ಲಿರುವ ಹಿರಿಯ ಅನುಭವಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ತಂಡವನ್ನು ಸೇರಿಕೊಂಡಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಕೂಡಾ ತಂಡಕ್ಕೆ ಬಲ ತುಂಬಲಿದ್ದಾರೆ.

ಆದರೆ ಅತಿಯಾದ ಕ್ರಿಕೆಟ್ ಆಡುತ್ತಿರುವ ತಂಡದ ಖಾಯಂ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಮನಸ್ಸು ಮಾಡಲಿಲ್ಲ. ಉಳಿದಂತೆ ಗೌತಮ್ ಗಂಭೀರ್, ಇಶಾಂತ್ ಶರ್ಮಾ ಮತ್ತು ಪ್ರಗ್ಯಾನ್ ಓಜಾ ಟೆಸ್ಟ್ ತಂಡಕ್ಕೆ ವಾಪಾಸಾಗಿದ್ದರೆ ವಿರಾಟ್ ಕೊಹ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಟೆಸ್ಟ್ ತಂಡದಲ್ಲಿ ಪಂಜಾಬ್ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಹೊರಗಿರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ತವರಿನ ಪರಿಸ್ಥಿತಿಯಲ್ಲಿ ಎದುರಾಳಿಗಳಿಗೆ ಪ್ರತಿ ಬಾರಿಯೂ ಅಪಾಯಕಾರಿ ಎನಿಸಿಕೊಂಡಿರುವ ಹರಭಜನ್ ಅವರಿಗೆ ಕೊಕ್ ನೀಡಿರುವುದು ಟೀಕೆಗೆ ಕಾರಣವಾಗಿದೆ.

ಅದೇ ಹೊತ್ತಿಗೆ ಹರಭಜನ್ ಅನುಪಸ್ಥಿತಿಯ ಲಾಭ ಪಡೆಯುವಲ್ಲಿ ರಾಹುಲ್ ಶರ್ಮಾ ಮತ್ತು ಆರ್. ಅಶ್ವಿನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಯುವ ವೇಗಿಗಳಾದ ವರುಣ್ ಆರೋನ್ ಮತ್ತು ಉಮೇಶ್ ಯಾದವ್ ಸಹ ಅಚ್ಚರಿಯ ಆಯ್ಕೆ ಎನಿಸಿಕೊಂಡಿದ್ದಾರೆ.

PTI


ತಂಡ ಇಂತಿದೆ:
1. ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್)
2. ಗೌತಮ್ ಗಂಭೀರ್
3. ವೀರೇಂದ್ರ ಸೆಹ್ವಾಗ್
4. ರಾಹುಲ್ ದ್ರಾವಿಡ್
5. ಸಚಿನ್ ತೆಂಡೂಲ್ಕರ್
6. ವಿವಿಎಸ್ ಲಕ್ಷ್ಮಣ್
7. ಯುವರಾಜ್ ಸಿಂಗ್
8. ಆರ್. ಅಶ್ವಿನ್
9. ಪ್ರಗ್ಯಾನ್ ಓಜಾ
10. ಇಶಾಂತ್ ಶರ್ಮಾ
11. ಉಮೇಶ್ ಯಾದವ್
12. ವಿರಾಟ್ ಕೊಹ್ಲಿ
13. ವರುಣ್ ಆರೋನ್
14. ಅಜಿಂಕ್ಯಾ ರಹಾನೆ
15. ರಾಹುಲ್ ಶರ್ಮಾ

ವೆಬ್ದುನಿಯಾವನ್ನು ಓದಿ