ಭಾರತಕ್ಕೆ ತಟ್ಟಿದೆ ನಾಲ್ಕನೇ ಕ್ರಮಾಂಕದ ಆಟಗಾರನ ತಲೆಬಿಸಿ

ಸೋಮವಾರ, 21 ಅಕ್ಟೋಬರ್ 2013 (15:38 IST)
PR
PR
ಚಂಡೀಗಢ: 2011ನೇ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದ ತಲೆಬಿಸಿ ಇರಲಿಲ್ಲ. ಸಚಿನ್ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕ ಆಟಗಾರರಾಗಿದ್ದರೆ, ಗೌತಮ್ ಗಂಭೀರ್ ಒಂದನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ನಂತರ ವಿರಾಟ್ ಕೊಹ್ಲಿ ನಿರ್ಣಾಯಕ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಸಚಿನ್ ಏಕದಿನ ಪಂದ್ಯದಿಂದ ನಿವೃತ್ತಿಯಾದ ನಂತರ ಹಾಗೂ ಸೆಹ್ವಾಗ್ ಮತ್ತು ಗಂಭೀರ್ ಫಾರಂ ಕಳೆದುಕೊಂಡು ಅವರನ್ನು ಕೈಬಿಟ್ಟ ನಂತರ ಕೊಹ್ಲಿ ಮೂರನೇ ಕ್ರಮಾಂಕಕ್ಕೆ ಜಂಪ್ ಆಗಿದ್ದಾರೆ.

ಆದರೀಗ ನಿರ್ಣಾಯಕ ನಾಲ್ಕನೇ ಕ್ರಮಾಂಕದ ಆಟಗಾರ ಯಾರು ಎನ್ನುವುದೇ ಧೋನಿಗೆ ಚಿಂತೆಗೀಡುಮಾಡಿದೆ. ಆ ಕ್ರಮಾಂಕದಲ್ಲಿ ಅನೇಕ ಆಟಗಾರರನ್ನು ಆಡಿಸಲು ಧೋನಿ ಪ್ರಯತ್ನಿಸಿದ್ದಾರೆ. 2011ರ ಏಪ್ರಿಲ್‌ನಿಂದ ಐದು ಆಟಗಾರರು ಈ ಸ್ಥಾನಕ್ಕೆ ಲಗ್ಗೆ ಹಾಕಿದ್ದರು. 2011ರಲ್ಲಿ ಯುವರಾಜ್ ಸಿಂಗ್ ಅವರಿಗೆ ಆದ್ಯತೆ ನೀಡಲಾಗಿತ್ತು. ಆದರೆ ಅವರಿಗೆ ಕ್ಯಾನ್ಸರ್ ಮತ್ತು ತರುವಾಯದ ಚಿಕಿತ್ಸೆಯಿಂದ ಆ ಸ್ಥಾನ ರೋಹಿತ್ ಶರ್ಮಾ ಪಾಲಾಯಿತು.ರೋಹಿತ್‌ಗೆ ಧೋನಿ ಪೂರ್ಣ ಬೆಂಬಲ ನೀಡಿದರು. 2012ನೇ ಕಾಮನ್‌ವೆಲ್ತ್ ತ್ರಿಕೋನ ಸರಣಿಯಲ್ಲಿ ರೋಹಿತ್ ಐದು ಇನ್ನಿಂಗ್ಸ್‌ನಲ್ಲಿ ಕೇವಲ 79 ರನ್ ಗಳಿಸಿದರು. ಆದಾಗ್ಯೂ, ಆಯ್ಕೆದಾರರು ರೋಹಿತ್‌ನಲ್ಲಿ ವಿಶ್ವಾಸವಿರಿಸಿ ಏಷ್ಯಾ ಕಪ್‌ಗೆ ಆಯ್ಕೆಮಾಡಿದರು. ಆದರೆ ಅಲ್ಲೂ ಕೂಡ ರೋಹಿತ್ ಐದು ಇನ್ನಿಂಗ್ಸ್‌ನಲ್ಲಿ 13 ರನ್ ಗಳಿಸಿ ಸ್ಥಾನ ಕಳೆದುಕೊಂಡರು. ನಂತರ ದಿನೇಶ್ ಕಾರ್ತಿಕ್ ಮತ್ತು ಚೇತರಿಸಿಕೊಂಡ ಯುವರಾಜ್ ಸಿಂಗ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದರು.

ನಂತರ ನಂಬರ್ 4 ಸ್ಥಾನ ಮತ್ತೆ ನಿಖರ ಮತ್ತು ಶಾರ್ಟ್ ಪಿಚ್ ಬೌಲಿಂಗ್‌ಗೆ ತಿಣುಕಾಡುತ್ತಿದ್ದ ರೈನಾ ಪಾಲಾಯಿತು. 2015ನೇ ವಿಶ್ವ ಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲು ನಿಗದಿಯಾಗಿದ್ದು, ವೇಗ ಮತ್ತು ಬೌನ್ಸ್ ಮಾಮೂಲಿಯಾಗಿದ್ದು, ತಂಡದ ಆಡಳಿತ ಮಂಡಳಿ ನಾಲ್ಕನೇ ಕ್ರಮಾಂಕದ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ವೆಬ್ದುನಿಯಾವನ್ನು ಓದಿ