ಭಾರತದಿಂದ ಸಿಎಲ್ ಸ್ಥಳಾಂತರಕ್ಕೆ ಪಾಂಟಿಂಗ್ ಬೆಂಬಲ

ಗುರುವಾರ, 27 ನವೆಂಬರ್ 2008 (13:54 IST)
ಮುಂಬಯಿಯಲ್ಲಿ ಬುಧವಾರ ನಡೆದ ಸರಣಿ ಸ್ಪೋಟ ಮತ್ತು ಗುಂಡಿನ ಕಾದಾಟದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗಾಗಿನ ಭಾರತ ಪ್ರವಾಸವನ್ನು ತಾತ್ಕಲಿಕವಾಗಿ ರದ್ದುಗೊಳಿಸಿದೆ. ಆಸ್ಟ್ರೇಲಿಯನ್ ನಾಯಕ ರಿಕಿ ಪಾಂಟಿಂಗ್ ಅವರ ಪ್ರಕಾರ ಪ್ರಸಕ್ತ ಸಂದರ್ಭದಲ್ಲಿ ಇದು ಸರಿಯಾದ ನಿರ್ಧಾರ.

"ಎಲ್ಲಾ ಕ್ರಿಕೆಟ್ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನನ್ನ ಪ್ರಕಾರ ಪ್ರಸ್ತುತ ಇದು ಸರಿಯಾದ ನಿರ್ಧಾರ" ಎಂದು ಪಾಂಟಿಂಗ್ ಹೇಳಿದ್ದಾರೆ.

ಚಾಂಪಿಯನ್ಸ್ ಲೀಗ್‌ನ ಪ್ರಥಮ ಪಂದ್ಯ ಮುಂದಿನ ಬುಧವಾರ ಮಿಡೆಲೆಕ್ಸ್ ಮತ್ತು ವಿಕ್ಟೋರಿಯಾ ತಂಡಗಳ ನಡುವೆ ಮುಂಬಯಿಯಲ್ಲಿ ನಡೆಯಬೇಕಿದೆ. ಬುಧವಾರ ಸಂಜೆಯಿಂದ ಉಗ್ರರು ಅಟ್ಟಹಾಸ ಮೆರೆಯಿತ್ತಿರುವ ತಾಜ್ ಹೋಟೆಲ್‌ನಲ್ಲಿಯೇ ಈ ಎಲ್ಲಾ ಆಟಗಾರರು ಉಳಿದುಕೊಳ್ಳಬೇಕಿತ್ತು. ಮುಂಬಯಿಯಲ್ಲಿ ನಡೆಯಬೇಕಿರುವ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಾಗುವುದು ಎಂಬ ವರದಿಗಳಿವೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಆಸ್ಟ್ರೇಲಿಯನ್ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಪಂದ್ಯಾವಳಿ ರದ್ದುಗೊಂಡರೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅತಿ ದೊಡ್ಡ ನಷ್ಟ ಎಂದು ಹೇಳಿದ್ದಾರೆ.
PTI

ಇದು ಪ್ರಮುಖವಾದ ಪಂದ್ಯಾವಳಿಯಾಗಿದೆ ಎಂದು ಪಾಂಟಿಂಗ್ ಹೇಳಿದ್ದಾರೆ. ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದಾಗ ಪಂದ್ಯಾವಳಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ತಮ್ಮ ಬೆಂಬಲವಿದೆ ಎಂದವರು ಹೇಳಿದ್ದಾರೆ.

"ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮತ್ತು ಪಂದ್ಯಾವಳಿ ಸುಗಮವಾಗಿ ನಡೆಯಬೇಕೆಂದು ಬಯಸುವ ಎಲ್ಲರೂ ಪಂದ್ಯಾವಳಿ ಕಾರ್ಯಗತಗೊಳ್ಳಬೇಕೆಂದು ಬಯಸುತ್ತಾರೆ. ಆದ್ದರಿಂದ ಪಂದ್ಯಾವಳಿಯನ್ನು ಬೇರೆ ರಾಷ್ಟ್ರಕ್ಕೆ ಸ್ಥಳಾಂತರಿಸಬೇಕಾಗುತ್ತದೆ, ಹೀಗಾದಲ್ಲಿ ನಾನು ಇದಕ್ಕೆ ಪೂರ್ಣ ಬೆಂಬಲ ನೀಡುತ್ತೇನೆ" ಎಂದು ಆಸ್ಟ್ರೇಲಿಯನ್ ನಾಯಕ ಹೇಳಿದ್ದಾರೆ.

ತಾಜ್ ಹೋಟೆಲ್‌ನಲ್ಲಿ ಉಳಿದುಕೊಳ್ಳಬೇಕಿದ್ದ ಐಪಿಎಲ್ ಅಧಿಕಾರಿಗಳು ಮತ್ತು ಈಗಾಗಲೇ ಅಲ್ಲಿರುವ ಅಧಿಕಾರಿಗಳನ್ನು ಉಗ್ರರ ದಾಳಿ ತೊಂದರೆಗೀಡು ಮಾಡಿದೆ. ಚಾಂಪಿಯನ್ಸ್ ಲೀಗ್ ಮೇಲ್ವಿಚಾರಣಾ ಸಮಿತಿಯ ಅಧಿಕಾರಿ ಡಿನ್ ಕಿನೊ ಉಗ್ರರ ದಾಳಿ ಸಂಭವಿಸುವಾಗ ಹೋಟೆಲಿನಲ್ಲಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾದ ವಕೀಲ, ಕಿನೊ ಟ್ವೆಂಟಿ20 ಲೀಗ್‌ನ ನಿಯಾಮವಳಿಗಳನ್ನು ತಯಾರಿಸಿದವರಾಗಿದ್ದಾರೆ. "ನಾವು ಮುಂಜಾನೆ 6ಗಂಟೆಯಿಂದ ಡಿನೊ ಅವರೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ಸಿಎಯ ವಕ್ತಾರ ತಿಳಿಸಿದ್ದಾರೆ. "ನಾವು ಅವರ ಪರಿವಾರದವರೊಂದಿಗೂ ಸಂಪರ್ಕ ಸಾಧಿಸಿದ್ದೇವೆ ಮತ್ತು ಅವರು ಸುರಕ್ಷಿತವಾಗಿದ್ದಾರೆ ಮತ್ತು ಈಗ ಹೋಟೆಲ್‌ನಲ್ಲಿಲ್ಲ ಎಂಬ ಬಗ್ಗೆ ಭರವಸೆ ನೀಡಬಲ್ಲೆವು" ಎಂದು ಅವರು ಹೇಳಿದ್ದಾರೆ.

ಮುಂಬಯಿ ಮೇಲೆ ಉಗ್ರರ ದಾಳಿಯ ಸುದ್ದಿ ಸಿಎ ಕಿವಿಗೆ ತಲುಪುತಿದ್ದಂತೆಯೇ, ಮುಂಬಯಿಯೆಡೆಗೆ ವಿಮಾನದಲ್ಲಿ ಪ್ರಯಾಣಸುತ್ತಿದ್ದ ಶೇನ್ ವಾರ್ನ್ ಅವರಿಗೆ ಸಿಂಗಾಪುರದಲ್ಲಿ ಇಳಿದುಕೊಳ್ಳುವಂತೆ ಸೂಚನೆಯಿತ್ತಿತು. ಐಪಿಎಲ್‌ನ ರಾಜಸ್ತಾನ್ ರಾಯಲ್ ತಂಡದ ಸದಸ್ಯರಾದ ವಾರ್ನ್ ಮತ್ತು ಡಾರೆನ್ ಬೆರ್ರಿ ಮುಂದಿನ ಸೂಚನೆಗಳನ್ನು ಇನ್ನಷ್ಟೇ ಪಡೆಯಬೇಕಿದೆ.

"ನನಗೆ ಆಘಾತವುಂಟಾಯಿತು. ನಾನು ಮತ್ತು ಡಾರೆನ್ ವಿಮಾನದಿಂದ ಇಳಿದೆವು ಮತ್ತು ಸುದ್ದಿಯನ್ನು ಟಿವಿಯಲ್ಲಿ ನೋಡಿದೆವು. ಇದು ನಂಬಲಾಸಧ್ಯ. ಆ ಪ್ರದೇಶದಲ್ಲಿ ಪೂರ್ಣ ಅವ್ಯವಸ್ಥೆಯಿದೆ. ನಾವು ಮುಂಬಯಿಗೆ ತೆರಳುತ್ತಿದ್ದೆವು ಮತ್ತು ಅದೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದೆವು. ನಾವು ಭಾರತಕ್ಕೆ ಹೋಗುತ್ತೇವೆ ಎಂದು ನನಗನಿಸುತ್ತಿಲ್ಲ. ಯಾಕೆ ಹೋಗಬೇಕು?" ಎಂದು ವಾರ್ನ್ ಪತ್ರಕರ್ತರಲ್ಲಿ ಪ್ರತಿಕ್ರಿಯಿಸಿದರು.

"ಅಪಾಯಕ್ಕೆ ಒಡ್ಡಿಕೊಳ್ಳುವುದು ಸರಿಯಲ್ಲ. ಅಲ್ಲಿರುವ ಪ್ರಸ್ತುತ ಸನ್ನಿವೇಶದಂತೆ ಯಾವುದೇ ಪ್ರಮಾಣದ ಹಣದ ಹೊರತಾಗಿಯೂ ಇಂತಹ ಅಪಾಯಕ್ಕೆ ಒಡ್ಡಿಕೊಳ್ಳುವುದು ಸಾಧ್ಯವಿಲ್ಲ" ಎಂದವರು ಹೇಳಿದ್ದಾರೆ.