ಮಂಡಳಿ ಜತೆ ಭಿನ್ನಮತ; ಏಕದಿನಕ್ಕೆ ಆಫ್ರಿದಿ ವಿದಾಯ

ಮಂಗಳವಾರ, 31 ಮೇ 2011 (10:29 IST)
PTI
ರಾಷ್ಟ್ರೀಯ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜತೆ ಮುನಿಸಿಕೊಂಡಿರುವ ಪಾಕಿಸ್ತಾನದ ಹಿರಿಯ ಅನುಭವಿ ಆಟಗಾರ ಶಾಹಿದ್ ಆಫ್ರಿದಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

ಪಾಕ್ ಜನತೆಯಿಂದ ಅಪಾರ ಪ್ರೀತಿ, ಗೌರವ ಲಭಿಸಿದೆ. ಆದರೆ ಆಟಗಾರರನ್ನು ಹೇಗೆ ಗೌರವಿಸಬೇಕೆಂಬುದು ತಿಳಿಯದ ಮಂಡಳಿ ಜತೆ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ಆಫ್ರಿದಿ ತಮ್ಮಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶೀಯ ಹಾಗೂ ಲೀಗ್ ಕ್ರಿಕೆಟ್‌ನಲ್ಲಿ ನಾನು ಆಡುವುದನ್ನು ಮುಂದುವರಿಸಲಿದ್ದೇನೆ. ಆದರೆ ನನ್ನ ಪರ ವಾದವನ್ನು ಆಲಿಸದೇ ನಾಯಕತ್ವದಿಂದ ಕೆಳಗಿಳಿಸಿರುವ ಮಂಡಳಿ ಜತೆ ಕೆಲಸ ಮಾಡಲು ಬಯಸುವುದಿಲ್ಲ ಎಂದು ಆಫ್ರಿದಿ ತಿಳಿಸಿದ್ದಾರೆ.

ಯಾವ ಅರ್ಥದಲ್ಲಿ ನನ್ನನ್ನು ನಾಯಕ್ವದಿಂದ ಕೆಳಗಿಳಿಸಲಾಗಿದೆ ಎಂಬುದಂತೂ ಗೊತ್ತಿಲ್ಲ. ಪೂರ್ಣವಾಗಿ ಮುರಿದು ಬಿದ್ದಿದ್ದ ತಂಡದ ನಾಯಕತ್ವ ವಹಿಸಿದ್ದ ನಾನು ತಂಡವನ್ನು ಸಂಘಟಿಸುವ ಮೂಲಕ ಹೋರಾಟ ಮನೋಭಾವವನ್ನು ಸೃಷ್ಟಿ ಮಾಡಿದ್ದೆ. ಇದರಿಂದ ವಿಶ್ವಕಪ್ ಸೆಮಿಫೈನಲ್ ಹಂತದ ವರೆಗೂ ತಲುಪಲು ತಂಡ ಯಶಸ್ವಿಯಾಗಿತ್ತು. ಹೀಗಿದ್ದರೂ ನನ್ನನ್ನು ವಜಾ ಮಾಡಲಾಗಿದೆ ಎಂದು ಆಫ್ರಿದಿ ವಿಷಾದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಲಾಹೋರ್ ಪಂಜಾಬ್ ಪ್ರಾಂತ್ಯದ ಕೆಲವು ಅಧಿಕಾರಿಗಳು ಯಾವತ್ತೂ ತಮ್ಮ ವಿರುದ್ಧ ತಂತ್ರ ಹಣೆಯುತ್ತಾರೆ ಎಂದು ಆಫ್ರಿದಿ ಆರೋಪಿಸಿದರು.

ಮಾತು ಮುಂದುವರಿಸಿದ ಆಫ್ರಿದಿ, ನಿವೃತ್ತಿ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತಲೂ ಮೊದಲು ಕೆಲವು ಹಿರಿಯ ಆಟಗಾರರ ಸಲಹೆ ಪಡೆದಿರುವುದಾಗಿ ತಿಳಿಸಿದರು.

ಇಜಾಜ್ ಭಟ್ ಮುಖ್ಯಸ್ಥದ ಮಂಡಳಿ ಅಧಿಕಾರದಲ್ಲಿರುವ ವರೆಗೂ ನಾನು ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ ಎಂಬುದನ್ನು ಸ್ಪಷ್ಟ ಮಾತುಗಳನ್ನು ಹೇಳ ಬಯಸುತ್ತೇನೆ. ಈ ಮಂಡಳಿ ಬದಲಾದ ನಂತರ ಹಿಂತಿರುವ ನಿರ್ಣಯವನ್ನು ಮರು ಪರಿಶೀಲಿಸಲೂ ಬಹುದು ಎಂದು ಆಫ್ರಿದಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ