ಮಹಿಳಾ ಕ್ರಿಕೆಟ್: ಭಾರತಕ್ಕೆ ಭರ್ಜರಿ ಗೆಲುವು

ಮಂಗಳವಾರ, 6 ಮೇ 2008 (17:53 IST)
ಕ್ರಿಕೆಟ್ ಜೀವನದ ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶಿಸಿದ ರುಮೇಲಿ ಧರ್ ಅವರ 92 ರನ್‌ಗಳನ್ನು ತನ್ನ ರಕ್ಷಣೆಗೆ ತೆಗೆದುಕೊಂಡ ಭಾರತೀಯ ವನಿತಾ ತಂಡದ ಬೌಲರುಗಳು, ಪಾಕಿಸ್ತಾನ ತಂಡಕ್ಕೆ 182 ರನ್‌ಗಳ ಸೋಲು ಉಣಿಸುವಲ್ಲಿ ಸಫಲರಾದರು. ಈ ಮೂಲಕ ಭಾರತೀಯ ವನಿತಾ ಕ್ರಿಕೆಟ್ ತಂಡವು ಸತತವಾಗಿ ಮೂರನೆ ಗೆಲುವನ್ನು ಮಹಿಳಾ ಏಷಿಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಾಖಲಿಸಿದ್ದರೆ, ಪಾಕಿಸ್ತಾನ ಸತತವಾಗಿ ಮೂರು ಪಂದ್ಯಗಳಲ್ಲಿ ಶರಣಾಗತವಾಯಿತು.

ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದ ಭಾರತೀಯ ವನಿತಾ ತಂಡವು ಎರಡು ವಿಕೆಟ್‌ಗಳನ್ನು ಪ್ರಾರಂಭದಲ್ಲಿ ಕಳೆದುಕೊಂಡು ಮುಗ್ಗರಿಸಿ ಆಶಾ ರಾವತ್ (69) ಮತ್ತು ಪ್ರಿಯಾಂಕಾ ರಾಯ್ ಅವರ 50 ರನ್‍ಗಳ ಜೊತೆಯಾಟದಿಂದ ಚೇತರಿಸಿಕೊಂಡಿತು. ನಂತರ ರುಮೇಲಿ ಧರ್ ಮತ್ತು ಆಶಾ ರಾವತ್ ಜೋಡಿಯು 89 ರನ್ ಕಲೆ ಹಾಕಿತು, ಅಜೇಯರಾಗಿ ಉಳಿದ ಆಶಾ ರಾವತ್ ಅವರು ಇತರ ಕೆಳ ಕ್ರಮಾಂಕದ ಬ್ಯಾಟುಗಾರ್ತಿಯರಾದ ಜುಲನ್ ಗೋಸ್ವಾಮಿ ಮತ್ತು ಅಮೀತಾ ಶರ್ಮಾ ಅವರ ಚುರುಕಿನ ರನ್‌ಗಳಿಕೆಯ ನೆರವಿನಿಂದ ತಂಡದ ಮೊತ್ತವನ್ನು 275ಕ್ಕೆ ತಲುಪಿಸಿದರು.

ಪ್ರತ್ತ್ಯುತ್ತರವಾಗಿ ಇನಿಂಗ್ಸ್ ಆರಂಭಿಸಿದ ಪಾಕ್ ಮಹಿಳಾ ಕ್ರಿಕೆಟ್ ತಂಡವು ಐದು ರನ್‌ಗಳು ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಸೋಲಿನ ಹಾದಿಯಲ್ಲಿ ಸಾಗಿತು. ಪಾಕಿ ಬ್ಯಾಟುಗಾರ್ತಿಯರ ಪೈಕಿ ಕೇವಲ ಇಬ್ಬರು ಮಾತ್ರ ಎರಡಂಕಿಯನ್ನು ತಲುಪಿದ ಕಾರಣ ತಂಡದ ಮೊತ್ತವು 93ರ ಗಡಿ ದಾಟಲು ಸಾಧ್ಯವಾಯಿತು. ಈ 93 ರನ್‌ಗಳಲ್ಲಿ ಭಾರತೀಯ ಮಹಿಳಾ ಬೌಲರುಗಳು 33 ರನ್‌ಗಳನ್ನು ಇತರೆಗಳ ರೂಪದಲ್ಲಿ ನೀಡಿದ್ದು ಸೇರ್ಪಡೆಗೊಂಡಿದೆ. ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಗೌಹರ್ ಸುಲ್ತಾನಾ 10 ಓವರುಗಳ ಬೌಲಿಂಗ್‌ನಲ್ಲಿ ಏಳು ಮೇಡನ್ ಮತ್ತು 9 ರನ್ ನೀಡಿ ಮೂರು ವಿಕೆಟ್ ಪಡೆದು ಮಿಂಚಿದರು.

ವೆಬ್ದುನಿಯಾವನ್ನು ಓದಿ