ಮುಂಬಯಿ ಪಂದ್ಯಗಳ ಅತಿಥ್ಯ ವಹಿಸಲಿರುವ ಬೆಂಗಳೂರು

ಗುರುವಾರ, 27 ನವೆಂಬರ್ 2008 (15:07 IST)
ಮುಂಬಯಿ ಮೇಲಿನ ಉಗ್ರರ ದಾಳಿಯ ನಂತರ ತಮ್ಮ ಐಪಿಎಲ್ ತಂಡಗಳಾದ ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ವಿಕ್ಟೋರಿಯಾ ತಂಡಗಳ ಪ್ರವಾಸವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತಡೆ ಹಿಡಿದಿದೆ. ಈ ಮಧ್ಯೆ ಮುಂಬಯಿಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಲೀಗ್ ಪಂದ್ಯಗಳನ್ನು ಬೆಂಗಳೂರಿಗೆ ಸ್ಥಲಾಂತರಿಸಲಾಗುತ್ತದೆ ಎಂಬುದಾಗಿ ವರದಿಯಾಗಿವೆ.

ಅದೇನೇ ಇದ್ದರೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಮಿತಿಯ ಕಾರ್ಯದರ್ಶಿ ಬ್ರಿಜೇಶ್ ಪಾಟೀಲ್ ಈ ಸುದ್ದಿಯನ್ನು ಇನ್ನಷ್ಟೇ ಖಾತ್ರಿಗೊಳಿಸಬೇಕಿದೆ.

ಈಗಾಗಲೇ, ತಮ್ಮ ವಿಮಾನವನ್ನು ರದ್ದುಗೊಳಿಸಿರುವ ಇಂಗ್ಲೆಂಡ್‌ನ ಮಿಡೆಲೆಕ್ಸ್ ತಂಡದ ನಾಯಕ ಶಾನ್ ಉದಾಲ್ ಅವರು ತಮ್ಮ ತಂಡಕ್ಕೆ ಭಾರತ ಪ್ರವಾಸದ ಬಗ್ಗೆ ಆತಂಕವಿದೆ, ಆದರೆ ಪಂದ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಿದಲ್ಲಿ ಮತ್ತು ತಂಡಕ್ಕೆ ಪೂರ್ಣ ಭದ್ರತೆಯ ಭರವಸೆ ನೀಡಿದಲ್ಲಿ ತಮ್ಮ ತಂಡ ಪ್ರವಾಸ ಮುಂದುವರೆಸುವುದು ಎಂದು ತಿಳಿಸಿದ್ದಾರೆ.

"ನಮಗೆ ಈ ಬಗ್ಗೆ ಆತಂಕವಿದೆ. ನಮ್ಮಲ್ಲಿ ಹಲವರಿಗೆ ಕುಟುಂಬ ಮತ್ತು ಮಕ್ಕಳಿದ್ದಾರೆ. ಪ್ರಸ್ತುತ ಇದು ಕೇವಲ ಕ್ರಿಕೆಟ್ ಪಂದ್ಯಾವಳಿಯ ಪ್ರಶ್ನೆಯಾಗಿ ಉಳಿದಿಲ್ಲ. ಬೆಂಗಳೂರಿನಲ್ಲಿ ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಭರವಸೆ ನೀಡಿದಲ್ಲಿ ನಾವು ಅಲ್ಲಿಗೆ ಹೋಗುತ್ತೇವೆ" ಎಂದು ಉದಾಲ್ ಹೇಳಿದ್ದಾರೆ.
PTI

"ಅತ್ಯಂತ ಕಳವಳಕಾರಿಯಾದ ವಿಷಯವೆಂದರೆ 24ಗಂಟೆಗಳ ನಂತರ ನಾವು ಅದೇ ತಾಜ್ ಹೋಟೆಲ್‌ನಲ್ಲಿ ಉಳಿದುಕೊಂಡಿರುತ್ತಿದ್ದೆವು. ಇದರಿಂದಾಗಿ ಈ ವಿಷಯ ನೇರವಾಗಿ ಹೃದಯಕ್ಕೆ ನಾಟಿದೆ. ನಾವು 24 ಗಂಟೆಗಳ ಮೊದಲೇ ಹೊರಟಿದ್ದರೆ, ಅಲ್ಲಿ ಮಿಡಲೆಕ್ಸ್ ತಂಡವಿರುತಿತ್ತು. ನಾವು ಅಲ್ಲಿರುತ್ತಿದ್ದೆವು" ಎಂದು ಅವರು ಹೇಳಿದ್ದಾರೆ.

ಭದ್ರತೆಗೆ ತಾವು ಮುಖ್ಯ ಅದ್ಯತೆ ಕೊಡುವುದಾಗಿ ಇಂಗ್ಲೆಂಡ್ ತಂಡದ ಕೋಚ್ ಹೇಳಿದ್ದಾರೆ. ಆಟಗಾರರು ಮತ್ತು ಅವರ ಪರಿವಾರ ಈ ಪ್ರವಾಸದ ಬಗ್ಗೆ ಒಪ್ಪಿಗೆ ಹೊಂದಿದೆಯೇ ಎಂದು ಗಮನಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಕ್ಟೋರಿಯಾ ತಂಡದ ವಕ್ತಾರರೊಬ್ಬರು, ಪ್ರವಾಸ ಕೈಗೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಸೂಚನೆಯಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ವಿಕ್ಟೋರಿಯಾ ಮತ್ತು ಇಂಗ್ಲೆಂಡ್‌ನ ಮಿಡೆಲೆಕ್ಸ್ ತಂಡಗಳ ನಡುವೆ ಬುಧವಾರ ಮುಂಬಯಿಯಲ್ಲಿ ಲೀ‌ಗ್‌ನ ಆರಂಭಿಕ ಪಂದ್ಯ ನಡೆಬೇಕಿತ್ತು.