ಮುಂಬೈನ ಸ್ಪರ್ಧಾತ್ಮಕ ಪಿಚ್‌ ಬ್ರಬೋರ್ನ್‌ನಲ್ಲಿ ನಿರ್ಣಾಯಕ ಟೆಸ್ಟ್

ಶನಿವಾರ, 28 ನವೆಂಬರ್ 2009 (17:15 IST)
36 ವರ್ಷಗಳ ನಂತರ ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಡಿಸೆಂಬರ್ 2ರಿಂದ 6ರ ವರೆಗೆ ನಡೆಯಲಿರುವ ಅಂತಿಮ ಟೆಸ್ಟ್‌ಗಾಗಿನ ಪಿಚ್ ಸ್ಪರ್ಧಾತ್ಮಕವಾಗಿರಲಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.

ಇದು ಉತ್ತಮ ಟೆಸ್ಟ್ ವಿಕೆಟ್ ಆಗಿರಲಿದೆ. ಪಿಚ್ ಗಟ್ಟಿಯಾಗಿರುವುದರಿಂದ ವೇಗಿಗಳು ಎಸೆದ ಚೆಂಡು ಪುಟಿದೇಳಲಿದೆ. ಅಲ್ಲದೆ ದಿನದ ಪ್ರಥಮ ಅವಧಿಯಲ್ಲಿ ಬೌಲರ್‌ಗಳು ತೇವದ ಲಾಭಾಂಶವನ್ನು ಪಡೆಯಬಹುದು ಎಂದು ಸಿಸಿಐ ಕ್ರಿಕೆಟ್ ಕಾರ್ಯದರ್ಶಿ ಹಾಗೂ ಮಾಜಿ ಮುಂಬೈ ಕಪ್ತಾನ ಮಿಲಿಂದ್ ರೆಜೆ ವರದಿಗಾರರಿಗೆ ತಿಳಿಸಿದ್ದಾರೆ.

ಇಲ್ಲಿಗೆ ಸಮೀಪವಿರುವ ವಾಂಖೇಡೆ ಸ್ಟೇಡಿಯಂನಲ್ಲಿ ದುರಸ್ತಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನಲೆಯಲ್ಲಿ 36 ವರ್ಷಗಳ ನಂತರ ಬ್ರಬೋರ್ನೆ ಸ್ಟೇಡಿಯಂಗೆ ಪಂದ್ಯಾಟವೊಂದನ್ನು ಆಯೋಜಿಸುವ ಅವಕಾಶ ಲಭಿಸಿದೆ.

ಇಲ್ಲಿ ಕೊನೆಯದಾಗಿ 1973ರಲ್ಲಿ ಭಾರತ-ಇಂಗ್ಲೆಂಡ್ ವಿರುದ್ಧ ಪಂದ್ಯ ನಡೆದಿತ್ತು. ಅಂದು ಭಾರತ ತಂಡವನ್ನು ಅಜೀತ್ ವಾಡೇಕರ್ ಮುನ್ನಡೆಸಿದ್ದರು.

ಮೊದಲ ಪಂದ್ಯ ನಡೆದ ಅಹಮಾದಾಬಾದ್ ಪಿಚ್‌ಗೆ ಸಮಾನವಾಗಿ ಇಲ್ಲಿನ ಪಿಚ್ ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಂಬೈ ಮಾಜಿ ಸ್ಪಿನ್ನರ್ ರೆಜೆ, 'ನನಗೆ ಹಾಗೇ ತೋರುತ್ತಿಲ್ಲ. ಮೈದಾನದಲ್ಲಿ ಇದೀಗ ಹುಲ್ಲು ಇವೆ, ಭಾನುವಾರ ವೇಳೆಗೆ ಇದನ್ನು ತೆಗೆಯಲಾಗುವುದು ಎಂದರು.

ಅದೇ ವೇಳೆ ಮಂಡಳಿಯ ಪಿಚ್ ಹಾಗೂ ಮೈದಾನ ಸಮಿತಿ ಅಧ್ಯಕ್ಷ ದಲ್ಜೀತ್ ಸಿಂಗ್ ಭಾನುವಾರ ಕ್ರೀಡಾಂಗಣಕ್ಕೆ ಭೇಟಿ ನೀಡಲಿದ್ದು, ಕೆಲವು ಮಹತ್ವದ ಸಲಹೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಇಲ್ಲಿ ಆಡಲಾದ ಕಳೆದ 17 ಟೆಸ್ಟ್‌ಗಳಲ್ಲಿ 11ರಲ್ಲಿ ಡ್ರಾ ಫಲಿತಾಂಶ ಕಂಡರೆ ನಾಲ್ಕು ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಅದೇ ವೇಳೆ ಎರಡರಲ್ಲಿ ಸೋಲುಂಡಿದೆ.

ಒಟ್ಟಾರೆಯಾಗಿ ಇಲ್ಲಿನ ನೂತನ ಪಿಚ್ ಭಾರತಕ್ಕೆ ಯಾವ ರೀತಿ ಸಹಕರಿಸುತ್ತದೆಯೋ ಎಂಬುದನ್ನು ಡಿಸೆಂಬರ್ 2ರಿಂದ ಆರಂಭವಾಗಲಿರುವ ಪಂದ್ಯವೇ ಹೇಳಲಿದೆ.


ವೆಬ್ದುನಿಯಾವನ್ನು ಓದಿ