ಮುಂಬೈ ಡ್ರೆಸ್ಸಿಂಗ್ ರೂಮ್ ಮಿಸ್ ಮಾಡಲಿದ್ದೇನೆ: ಜಯಸೂರ್ಯ

ಬುಧವಾರ, 12 ಜನವರಿ 2011 (09:40 IST)
ವಿಶ್ವದ ಯಶಸ್ವಿ ಎಡಗೈ ದಾಂಡಿಗ ಸನತ್ ಜಯಸೂರ್ಯ ಅವರ ಕ್ರಿಕೆಟ್ ಜೀವನವು ಬಹುತೇಕ ಅಂತ್ಯಗೊಂಡಂತಾಗಿದೆ. ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಾಗದ ಜಯಸೂರ್ಯ ಇದೀಗ ಐಪಿಎಲ್ ಹರಾಜಿನಲ್ಲೂ ಬಿಕರಿಯಾಗದೇ ಉಳಿಯುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಆದರೆ ಈ ಬಗ್ಗೆ ಜಯಸೂರ್ಯ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕ್ರಿಕೆಟ್‌ನಲ್ಲಿ ಇವೆಲ್ಲವೂ ಮಾಮೂಲಿ. ದೀರ್ಘಕಾಲದಿಂದ ನಾನಿದ್ದನ್ನು ಅನುಭವಿಸುತ್ತಿದ್ದೇನೆ. ಪ್ರೊಫೆಷನಲ್ ಕ್ರಿಕೆಟರ್ ಆದ ನನಗೆ ಇಂತಹ ಪರಿಸ್ಥಿತಿ ನಿಭಾಯಿಸಲು ಗೊತ್ತು. ಎಲ್ಲ ಆಟಗಾರರ ಹಾಗೆಯೇ ನನಗೂ ವಿಶ್ವಕಪ್‌ನಲ್ಲಿ ಆಡುವ ಬಯಕೆಯಿತ್ತು. ಆದರೆ ಇವೆಲ್ಲವೂ ನನ್ನ ಅಧೀನತೆಯಲ್ಲಿಲ್ಲ. ಈ ಸಂದರ್ಭದಲ್ಲಿ ನಾನು ತಂಡಕ್ಕೆ ಶುಭಕೋರಲು ಬಯಸುತ್ತೇನೆ ಎಂದು ಐದು ವಿಶ್ವಕಪ್‌ಗಳಲ್ಲಿ ಲಂಕಾ ಪರ ಆಡಿರುವ ಜಯಸೂರ್ಯ ನುಡಿದರು.

ಹಾಗೆಯೇ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಲಂಕನ್ ಆಲ್‌ರೌಂಡರ್, ಈ ಪ್ರತಿಷ್ಠಿತ ಕೂಟದಿಂದ ದೂರವುಳಿಯುವುದೆಂದರೆ ಕಠಿಣ ವಿಚಾರ ಎಂದರು.

ಕಳೆದ ಮೂರು ವರ್ಷ ಮುಂಬೈ ಡ್ರೆಸ್ಸಿಂಗ್ ರೂಮ್ ನಾನು ಹಂಚಿಕೊಂಡಿದ್ದು, ಹಲವು ಸ್ಮರಣೀಯ ಅನುಭವ ಗಿಟ್ಟಿಸಿದ್ದೇನೆ. ಮುಂಬೈ ಅಮೋಘ ತಂಡವಾಗಿದ್ದು ಸಚಿನ್ ತೆಂಡೂಲ್ಕರ್ ತಂಡವನ್ನು ಅದ್ಭುತವಾಗಿ ಮುನ್ನೆಡೆಸಿದ್ದಾರೆ. ಮುಂಬರುವ ಆವೃತ್ತಿಯಲ್ಲಿಯೂ ತಂಡ ಅತ್ಯುತ್ತಮ ಆಟವಾಡಲಿದೆಯೆಂಬ ಭರವಸೆಯಿದೆ ಎಂದು 444 ಏಕದಿನ ಪಂದ್ಯಗಳನ್ನಾಡಿರುವ ಸಚಿನ್ ನುಡಿದರು.

ವಿಶ್ವಕಪ್ ಬಗ್ಗೆ ಮಾತನಾಡಿದ ಅವರು, ಏಷ್ಯಾ ಉಪಖಂಡದ ತಂಡಗಳು ಫೇವರಿಟ್ ಆಗಿವೆ ಎಂದರು. ಪ್ರಸ್ತುತ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಶ್ರೀಲಂಕಾ ಅಪಾಯಕಾರಿ ತಂಡ. ಪಾಕಿಸ್ತಾನ ಕೂಡಾ ಕಿವೀಸ್‌ನಲ್ಲಿ ಚೆನ್ನಾಗಿ ಆಡುತ್ತಿದೆ. ಈ ಮೂರು ತಂಡಗಳಲ್ಲಿ ಯಾವುದಾದರೂ ಒಂದು ತಂಡಕ್ಕೆ ಅವಕಾಶ ಹೆಚ್ಚಿದೆ ಎಂದರು.

ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಯೋಚನೆ ಮಾಡಿಲ್ಲ. ನಾನೀಗ ಫಿಟ್‌ನೆಸ್ ಸಮಸ್ಯೆ ಅನುಭವಿಸುತ್ತಿಲ್ಲ. ಹೀಗಾಗಿ ದೇಶಿಯ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದೇನೆ ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ