ಮೋಸದಾಟ ಸಾಬೀತುಪಡಿಸಲಿ: ಹಷನ್‌ಗೆ ಮಹೇಲಾ ಸವಾಲು

ಶನಿವಾರ, 30 ಏಪ್ರಿಲ್ 2011 (12:21 IST)
ಶ್ರೀಲಂಕಾ ಕ್ರಿಕೆಟ್ ವಲಯದಲ್ಲಿ 1992ರಿಂದಲೇ ಮೋಸದಾಟ ನಡೆಯುತ್ತಿದ್ದು, ಇತ್ತೀಚೆಗಷ್ಟೇ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಕಳ್ಳಾಟ ನಡೆದಿರುವ ಬಗ್ಗೆ ಶಂಕೆಯಿದೆ ಎಂಬ ಮಾಜಿ ನಾಯಕ ಹಷನ್ ತಿಲಕರತ್ನೆ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮಹೇಲಾ ಜಯವರ್ಧನೆ, ಸಾಧ್ಯವಾದಲ್ಲಿ ಆಪಾದನೆ ಮೊದಲು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಜನರು ಏನೇ ಬೇಕಾದರೂ ಮನಬಂದಂತೆ ಮಾತನಾಡಬಹುದು. ಆದರೆ ನೀವು ಆರೋಪ ಸಾಬೀತುಪಡಿಸುವ ಅಗತ್ಯವಿದೆ ಎಂದು ಹಿಂದೊಮ್ಮೆ ತಮ್ಮ ಸಹ ಆಟಗಾರನಾಗಿದ್ದ ಹಷನ್‌ಗೆ ಸವಾಲು ಹಾಕಿದರು.

ತಿಲಕರತ್ನೆ ಮಾಡಿರುವ ಆಪಾದನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಜಯವರ್ಧನೆ, ಮೊದಲು ಆಪಾದನೆಗಳಿಗೆ ತಕ್ಕ ಪುರಾವೆ ಒದಗಿಸಲಿ. ಆನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

ನಾನು ಪ್ರತಿಕ್ರಿಯೆ ನೀಡುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಮಾಧ್ಯಮದ ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದೀಗ ಹಷನ್ ಏನನ್ನು ಸಾಬೀತುಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಲ್ಲಿಯ ವರೆಗೆ ನೊ ಕಾಮೆಂಟ್ಸ್ ಎಂದರು.

ವೆಬ್ದುನಿಯಾವನ್ನು ಓದಿ