ಮ್ಯಾಚ್ ಫಿಕ್ಸಿಂಗ್; ಗುಟ್ಟು ಬಿಡದ ಹಷನ್ ತಿಲಕರತ್ನೆ

ಮಂಗಳವಾರ, 3 ಮೇ 2011 (17:23 IST)
1992ರಿಂದಲೇ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಮೋಸದಾಟ ನಡೆಯುತ್ತಿದೆ ಎಂದು ಬಾಂಬ್ ಸಿಡಿಸಿದ್ದ ಶ್ರೀಲಂಕಾ ಮಾಜಿ ನಾಯಕ ಹಷನ್ ತಿಲಕರತ್ನೆ, ಯಾವೆಲ್ಲ ಆಟಗಾರರು ಮೋಸದಾಟ ಪಾಲ್ಗೊಂಡಿದ್ದಾರೆ ಎಂಬುದನ್ನು ಐಸಿಸಿ ಬಳಿ ಮಾತ್ರ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ನಾನು ನೀಡಿದ್ದ ಹೇಳಿಕೆಯಲ್ಲಿ ಸ್ಥಿರವಾಗಿದ್ದೇನೆ. ಆದರೆ ಭದ್ರತಾ ಭೀತಿಯಿಂದಾಗಿ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಇದನ್ನು ಐಸಿಸಿ ಸಮ್ಮುಖದಲ್ಲಿ ಮಾತ್ರ ಹೊರಗೆಡವುತ್ತೇನೆ ಎಂದವರು ಸ್ಪಷ್ಟಪಡಿಸಿದರು.

ಶ್ರೀಲಂಕಾ ಸ್ಥಳೀಯ ಚಾನೆಲ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದ ಹಷನ್, ಸದ್ಯದಲ್ಲೇ ಕೆಲವು ಆಟಗಾರರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದರು.

ನನ್ನ ಆತ್ಮಸಾಕ್ಷಿಯಾಗಿ ಹೇಳ್ತೀನಿ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಕಳ್ಳಾಟ ಇಂದು ಅಥವಾ ನಿನ್ನೆಯಿಂದ ಆರಂಭಿಸಿದ ಪ್ರಕ್ರಿಯೆಯಲ್ಲ. ಇದು 1992ರಿಂದಲೇ ನಡೆಯುತ್ತಿದೆ ಎಂದವರು ಹೇಳಿದರು. ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ್ದ ಸಮಕಾಲೀನ ಕ್ರಿಕೆಟಿಗರು, ಮೊದಲಿಗೆ ತಮ್ಮ ಆರೋಪಗಳನ್ನು ಹಷನ್ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದರು.

ವೆಬ್ದುನಿಯಾವನ್ನು ಓದಿ