ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿಗೆ ಕಾಂಗರೂ ಕಂಗಾಲು

ಗುರುವಾರ, 23 ಫೆಬ್ರವರಿ 2012 (19:55 IST)
ಟೆಸ್ಟ್ ಕ್ರಿಕೆಟ್‌ಗೆ ಬಿರುಗಾಳಿಯಂತೆ ಪ್ರವೇಶ ಮಾಡಿದ ರವಿಚಂದ್ರನ್ ಅಶ್ವಿನ್ ಸ್ವದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಪ್ರಭಾವಿಯಾಗುವ ಸಂಕೇತ ನೀಡಿದ್ದಾರೆ. ಕಾಂಗರೂಗಳ ನಾಡಿನಲ್ಲಿಯೂ ಅವರು ಸ್ಪಿನ್ ಮೋಡಿಯಿಂದ ಮಿಂಚಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಚೇರಮನ್ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಅಶ್ವಿನ್ ನಾಲ್ಕು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಶತಕ ಸಾಧನೆ ಮಾಡಿದ ಎಡ್ ಕೊವನ್ (109; 154 ಎಸೆತ, 16 ಬೌಂಡರಿ) ಇನ್ನಷ್ಟು ಅಬ್ಬರಿಸದಂತೆ ಕಡಿವಾಣ ಹಾಕಿ ನಿಲ್ಲಿಸಿದ್ದು ಕೂಡ ಇದೇ ಯುವ ಬೌಲರ್.

ಬ್ಯಾಟಿಂಗ್ ವಿಭಾಗದಲ್ಲಿಯೂ ಭಾರತ ತಂಡದ ಯುವಕರದ್ದೇ ದರ್ಬಾರ್. ವೀರೇಂದ್ರ ಸೆಹ್ವಾಗ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಅವರಂಥ ಅನುಭವಿಗಳು ಪರದಾಟಿದ ಅಂಗಳದಲ್ಲಿಯೇ ವಿರಾಟ್ ಕೊಹ್ಲಿ (132; 171 ಎ., 18 ಬೌಂಡರಿ, 2 ಸಿಕ್ಸರ್) ಶತಕ ಗಳಿಸಿ ಸಂಭ್ರಮಿಸಿದರು.

ಸೋಮವಾರದ ಆಟದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 162 ರನ್‌ಗಳನ್ನು ಗಳಿಸಿದ್ದ ಭಾರತ ತಂಡವು 79.1 ಓವರುಗಳಲ್ಲಿ 269 ರನ್ ಮೊತ್ತ ಪೇರಿಸಿ ಆಲ್‌ಔಟ್ ಆಯಿತು. ಮೊದಲ ದಿನದಾಟದಲ್ಲಿ 55 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದ ಕೊಹ್ಲಿ ಮಂಗಳವಾರ ಮತ್ತೆ ತಮ್ಮ ನಿರಾತಂಕವಾಗಿ ಬ್ಯಾಟ್ ಬೀಸಿದರು. ಮತ್ತೆ ಹದಿಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಎದುರಾಳಿ ಪಡೆಯ ಬೌಲರ್‌ಗಳನ್ನು ಕಾಡಿದರು.

ವೆಬ್ದುನಿಯಾವನ್ನು ಓದಿ