ರಾಜ್ ಕುಂದ್ರಾ ಅಮಾನತು

ಮಂಗಳವಾರ, 11 ಜೂನ್ 2013 (11:30 IST)
PR
PR
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಿಂದ ಬೆರಗಾಗಿರುವ ಬಿಸಿಸಿಐ, ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನು ಅಮಾನತುಗೊಳಿಸಿದೆ. ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಂದ್ರಾ ಅವರನ್ನು ಸೋಮವಾರ ಸೇರಿದ್ದ ತುರ್ತು ಸಭೆಯಲ್ಲಿ ಅಮಾನತುಗೊಳಿಸಲಾಗಿದೆ.

ಇದರೊಂದಿಗೆ ಇಂಡಿಯನ್ ಪ್ರೀಯರ್ ಲೀಗ್ ಅನ್ನು ಆರೋಪ ಮುಕ್ತಗೊಳಿಸಲು 12 ಸೂತ್ರಗಳ 'ಆಪರೇಷನ್ ಕ್ಲೀನ್-ಅಪ್‌' ಎಂಬ ಕಾರ್ಯಕ್ರಮ ಘೋಷಿಸಿದೆ.

ತುರ್ತು ಸಭೆಯಲ್ಲಿ ಬಿಸಿಸಿಐನ ಕಾರ್ಯಕಾರಿಣಿ ಸಮಿತಿಯ ಎಲ್ಲ ಉನ್ನತಮಟ್ಟದ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು. ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ಅಮಾನತುಗೊಳಿಸಲಾಗಿರುವ ಕುಂದ್ರಾ ಬಗ್ಗೆ ತನಿಖೆ ನಡೆಸಲಾಯಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್. ಶ್ರೀನಿವಾಸನ್ ನಂತರ ಕುಂದ್ರಾ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿಕೊಂಡಿರುವ ಐಪಿಎಲ್ ತಂಡದ 2ನೇ ಮಾಲೀಕರಾಗಿದ್ದಾರೆ. ಅಳಿಯ ಮತ್ತು ಚೆನ್ನೈ ತಂಡದ ಪ್ರಿನ್ಸಿಪಾಲ್ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದ್ದರು.

ಮೇಯಪ್ಪನ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಟಿ. ಜಯರಾಮ್ ಚೌತಾ ಮತ್ತು ನ್ಯಾಯಮೂರ್ತಿ ಆರ್. ಬಾಲಸುಬ್ರಮಣ್ಯನ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ಆಯೋಗವೇ ರಾಜಸ್ಥಾನ ರಾಯಲ್ಸ್ ತಂಡದ ರಾಜ್ ಕುಂದ್ರಾ ಕುರಿತು ತನಿಖೆ ನಡೆಸಬೇಕು ಎಂದು ಬಿಸಿಸಿಐ ತೀರ್ಮಾನಿಸಿದೆ. 'ಐಪಿಎಲ್ ಆರನೇ ಆವೃತ್ತಿಯಲ್ಲಿ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕುಂದ್ರಾ ಅವರನ್ನು ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಅಮಾನತುಗೊಳಿಸಿದೆ'ಎಂದು ಬಿಸಿಸಿಐ ಹಂಗಾಮಿ ಮುಖ್ಯಸ್ಥ ಜಗಮೋಹನ್ ದಾಲ್ಮಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

'ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರು ಕುಂದ್ರಾ ಬಗ್ಗೆ 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಕುಂದ್ರಾ ಒಪ್ಪಿಕೊಂಡಿದ್ದಾರೆ' ಎಂದು ಸಹ ಅವರು ಹೇಳಿದರು. ತನಿಖೆಯಲ್ಲಿ ಕುಂದ್ರಾ ವಿರುದ್ಧದ ಆರೋಪಗಳು ಸಾಬೀತಾದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಐಪಿಎಲ್‌ನಿಂದ ವಜಾಗೊಳಿಸಬಹುದು. ವಜಾಗೊಳಿಸುವಂತೆ ತೀರ್ಮಾನದಿಂದ ತಪ್ಪಿಸಿಕೊಳ್ಳಲು ಫ್ರಾಂಚೈಸಿ ಕುಂದ್ರಾ ಅವರಿಂದ ಈಗಾಲೇ ಅಂತರ ಕಾಪಾಡಿಕೊಳ್ಳುತ್ತಿದೆ.

ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರವಿ ಸಾವಂತ್ ಅವರನ್ನು, ಅಜಯ್ ಶಿರ್ಕೆ ರಾಜಿನಾಮೆ ಹಿನ್ನೆಲೆಯಲ್ಲಿ ತೆರವಾದ ಬಿಸಿಸಿಐ ಖಜಾಂಚಿ ಸ್ಥಾನಕ್ಕೆ ಸಭೆಯಲ್ಲಿ ನೇಮಕ ಮಾಡಲಾಯಿತು. ಬಿಸಿಸಿಐ ಭ್ರಷ್ಟಾಚಾರ ಮತ್ತು ಭದ್ರ ಘಟಕದ ಮುಖ್ಯಸ್ಥ ರವಿ ಸವಾನಿ, ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರಾದ ವೇಗಿ, ಎಸ್. ಶ್ರೀಶಾಂತ್, ಅಶೋಕ್ ಚಾಂಡಿಲಾ ಮತ್ತು ಅಂಕಿತ್ ಚೌಹಣ್ ಅವರ ಬಗ್ಗೆ ನಡೆಸಿದ ತನಿಖೆಯ ವರದಿಯನ್ನು ಸಭೆಯಲ್ಲಿ ಬಿಸಿಸಿಐಗೆ ಸಲ್ಲಿಸಿದರು. ಈ ವರದಿಯನ್ನು ಶಿಸ್ತು ಸಮಿತಿಗೆ ಕಳವಹಿಸಲು ಬಿಸಿಸಿಐ ತೀರ್ಮಾನಿಸಿದೆ. ಐಪಿಎಲ್ ಪಂದ್ಯಗಳಲ್ಲಿನ ಚೀಯರ್ ಲೀಡರ್ಸ್ ಮತ್ತು ಪಂದ್ಯಗಳ ನಂತರ ನಡೆಯುವ ಪಾರ್ಟಿಗಳನ್ನು ನಿಷೇಧಿಸಲು ಬಿಸಿಸಿಐ ತೀರ್ಮಾನಿಸಿದೆ. ಆಟಗಾರರು ಮತ್ತು ತಂಡದ ಸಿಬ್ಬಂದಿಗಾಗಿ ಪಂದ್ಯಗಳ ನಂತರ ಪಾರ್ಟಿಯನ್ನು ಆಯೋಜಿಸಲಾಗುತ್ತದೆ. ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರಿಗೆ ಕಟ್ಟಿನಿಟ್ಟಿನ ನಿಯಮಗಳನ್ನು ಜಾರಿಗೆ ತರಲೂ ಸಹ ಸಭೆ ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ