ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ರದ್ದು :ಪಿಸಿಬಿ

ಮಂಗಳವಾರ, 30 ಜೂನ್ 2009 (16:57 IST)
PTI
ರಾಷ್ಟ್ರೀಯ ತಂಡದ ಹಿರಿಯ ಮತ್ತು ಕಿರಿಯ ಆಟಗಾರರ ಆಯ್ಕೆ ಸಮಿತಿಗಳನ್ನು ರದ್ದುಗೊಳಿಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ಎಜಾಜ್ ಭಟ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ, ಮುಂಬರುವ ದಿನಗಳಲ್ಲಿ ಆಯ್ಕೆಸಮಿತಿ ಯಾವಾಗ ರಚಿಸಲಾಗುತ್ತದೆ ಎನ್ನುವ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ಆದೇಶದವರೆಗೆ ಮಧ್ಯಂತರ ಆಯ್ಕೆ ಸಮಿತಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಪಿಸಿಬಿ ತಿಳಿಸಿದೆ.

ಪಿಸಿಬಿ ಅಧಿಕಾರಿಗಳೊಂದಿಗೆ ನಡೆದ ವೈಮನಸ್ಸಿನ ಹಿನ್ನೆಲೆಯಲ್ಲಿ, ಅಬ್ದುಲ್ ಖಾದೀರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕಳೆದ ತಿಂಗಳು ಮಧ್ಯಂತರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ವಿಕೆಟ್ ಕೀಪರ್ ವಾಸೀಂ ಬಾರಿ ಅವರನ್ನು ನೇಮಕ ಮಾಡಲಾಗಿದ್ದು , ಅವರೇ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಹಿರಿಯ ಆಟಗಾರರ ಆಯ್ಕೆ ಸಮಿತಿಯ ಸದಸ್ಯರಾದ ಮಾಜಿ ಟೆಸ್ಟ್ ಆಟಗಾರ ಸಲೀಂ ಜಾಫರ್ ಮತ್ತು ಶೋಯೇಬ್ ಮೊಹಮ್ಮದ್ ಹಾಗೂ ಕಿರಿಯ ಆಟಗಾರರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಇಲಿಯಾಸ್ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಸರಣಿಗಾಗಿ ವಾಸೀಂ ಬಾರಿಯವರನ್ನು 15 ಮಂದಿ ತಂಡದಲ್ಲಿ ಆಯ್ಕೆ ಮಾಡಲಾಗಿದ್ದು, ತಂಡದ ತರಬೇತುದಾರರಾಗಿ ಇಂತಿಖಾಬ್ ಆಲಂ, ನಾಯಕರಾಗಿ ಯುನೂಸ್ ಖಾನ್ ಮತ್ತು ಉಪನಾಯಕರಾಗಿ ಮಿಸ್ಬಾ ಉಲ್ ಹಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ