'ಲಾರೆಸ್' ವಿಶ್ವದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ರೇಸ್‌ನಲ್ಲಿ ಸಚಿನ್

ಶುಕ್ರವಾರ, 3 ಡಿಸೆಂಬರ್ 2010 (11:05 IST)
PTI
2011ನೇ ಸಾಲಿನ ಪ್ರತಿಷ್ಠಿತ 'ಲಾರೆಸ್' ವಿಶ್ವದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಗಾಗಿ ಟೆನಿಸ್‌‌ ಸ್ಟಾರ್ ರಾಫೆಲ್ ನಡಾಲ್ ಮತ್ತು ಫಾರ್ಮುಲಾ ವನ್ ಚಾಲಕ ಸೆಬಾಸ್ಟಿಯನ್ ವೆಟೆಲ್‌ರಂತಹ ಪ್ರಮುಖ ಕ್ರೀಡಾಪಟುಗಳೊಂದಿಗೆ ವಿಶ್ವ ಕ್ರಿಕೆಟ್‌ನ ಜೀವಂತ ದಿಗ್ಗಜ ಭಾರತದ ಹೆಮ್ಮೆಯ ಸಚಿನ್ ತೆಂಡೂಲ್ಕರ್ ಕೂಡಾ ಸ್ಪರ್ಧಿಸಲಿದ್ದಾರೆ.

ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೂಡಾ ಇದೇ ರೇಸ್‌ನಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 'ವರ್ಷದ ಕ್ರಿಕೆಟಿಗ' ಪ್ರಶಸ್ತಿಗೆ ಭಾಜನರಾಗಿದ್ದ ಲಿಟ್ಲ್ ಮಾಸ್ಟರ್ ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವರೇ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಫುಟ್ಬಾಲ್‌ನ ಸ್ಟಾರ್ ಆಟಗಾರರಾದ ಡಿಯಾಗೊ ಫಾರ್ಲಾನ್, ಆಂಡ್ರೆಸ್ ಇನೆಸ್ಟಾ ಮತ್ತು ಲಯನೆಸ್ ಮೆಸ್ಸಿ ಕೂಡಾ ವೈಯಕ್ತಿಕ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಕಳೆದೊಂದು ವರ್ಷದಲ್ಲಿ ಸಚಿನ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಏಕದಿನದಲ್ಲಿ ದ್ವಿಶತಕ ಬಾರಿಸಿದ ಮೊದಲ ದಾಂಡಿಗ ಎಂದೆನಿಸಿಕೊಂಡಿದ್ದಾರೆ. ಫೆಬ್ರವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು.

ಅದೇ ರೀತಿ ಟೆಸ್ಟ್‌ನಲ್ಲಿ 14,000 ರನ್ನುಗಳ ಮೈಲುಗಲ್ಲು ತಲುಪಿದ ಮೊದಲ ಬ್ಯಾಟ್ಸ್‌ಮನ್ ಎಂದೆನಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು. ಇಷ್ಟೇ ಅಲ್ಲದೆ ತನ್ನ 171 ಟೆಸ್ಟ್ ಪಂದ್ಯಗಳ ಸುದೀರ್ಘ ಕ್ಯಾರಿಯರ್‌ನಲ್ಲಿ 49 ಟೆಸ್ಟ್ ಶತಕ ದಾಖಲಿಸಿದ್ದು, ಶತಕಗಳ ಅರ್ಧಶತಕಕ್ಕೆ ಕೇವಲ ಒಂದು ಶತಕದ ಅಗತ್ಯವಿದೆ.

ಮತ್ತೊಂದೆಡೆ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟುಗಳ ಸಾಧನೆ ಮಾಡಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗಿಂತ 92 ವಿಕೆಟುಗಳ ಅಂತರ ಕಾಯ್ದುಕೊಂಡಿದ್ದಾರೆ.

2010ನೇ ಸಾಲಿನ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸಾಧನೆಯನ್ನು ಗಮನಿಸಿ ಲಾರೆಸ್ ವಿಶ್ವದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ನೀಡಲಾಗುತ್ತದೆ. ಅಂತಿಮವಾಗಿ ನಾಮ ನಿರ್ದೇಶನ ಪಡೆಯುವ ಆರು ಮಂದಿ ಕ್ರೀಡಾಪಟುಗಳಲ್ಲಿ ಶ್ರೇಷ್ಠ ಕೀಡಾಪಟುವನ್ನು ಲಾರೆಸ್ ಮಿಡಿಯಾ ಆಯ್ಕೆ ಸಮಿತಿಯು ಜನವರಿ ತಿಂಗಳಲ್ಲಿ ಆಯ್ಕೆ ಮಾಡಲಿದೆ. ನಂತರ ಫೆಬ್ರವರಿ 7ರಂದು ಅಬುದಾಬಿನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ವೆಬ್ದುನಿಯಾವನ್ನು ಓದಿ