ವಾರ್ನ್-ಮುರಳಿ ಟ್ರೋಫಿಗೆ ಶ್ರೀಲಂಕಾ ಆಶಯ

ಬುಧವಾರ, 31 ಅಕ್ಟೋಬರ್ 2007 (17:04 IST)
ಶ್ರೀಲಂಕಾ ಮತ್ತು ಆಸ್ಟ್ರೇಲಿಯ ಕ್ರಿಕೆಟ್ ಪ್ರೇಮಿಗಳ ನಡುವೆ ಇರುವ ಜನಾಂಗೀಯ ಭೇದಭಾವ ಎರಡು ದೇಶಗಳ ಕ್ರಿಕೆಟ್ ಮಂಡಳಿಗಳಿಗಳಿಗೆ ತಲೆನೋವಾಗಿದ್ದು, ಈ ತಲೆ ನೋವು ಯಾವ ರೀತಿ ಪರಿಹರಿಸಬೇಕು ಎನ್ನುವುದಕ್ಕೆ ತಲೆ ಕೆಡಿಸಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಎರಡು ದೇಶಗಳ ಖ್ಯಾತ ಬೌಲರುಗಳಾದ ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳಿಧರನ್ ಅವರ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿಯೊಂದನ್ನು ಆಯೋಜಿಸುವುದಕ್ಕೆ ಯೋಚಿಸಿದೆ.

ಈ ನಿಟ್ಟಿನಲ್ಲಿ ಅದು ಆಸ್ಟ್ರೇಲಿಯದ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದು, ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿ ಕೂಡ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮಾಥಿವನ್, "ಖ್ಯಾತ ಸ್ಪಿನ್ ಬೌಲರುಗಳಿಬ್ಬರ ಹೆಸರಿನಲ್ಲಿ ಕ್ರಿಕೆಟ್ ಟೂರ್ನಿಯೊಂದನ್ನು ಆಯೋಜಿಸುವುದಕ್ಕೆ ನಾವು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಗೆ ಆಮಂತ್ರಣ ನೀಡಲಾಗಿದೆ" ಈ ಆಹ್ವಾನಕ್ಕೆ ಅವರುಗಳು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದು ವಾರದಲ್ಲಿ ಲಿಖಿತ ಒಪ್ಪಿಗೆಯನ್ನು ನಾವು ಆಸ್ಟ್ರೇಲಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಪಡೆಯಲಿದ್ದು, ಮುಂದಿನ ವರ್ಷ ಆಸ್ಟ್ರೇಲಿಯ, ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಮೂಲಕ ಅಧಿಕೃತವಾಗಿ ಸರಣಿ ಪ್ರಾರಂಭವಾಗಲಿದೆ.

1995-96ರ ಬಾಕ್ಸಿಂಗ್ ಡೆ ಸರಣಿಯಲ್ಲಿ ಡರೆಲ್ ಹೇರ್, ಮುತ್ತಯ್ಯ ಮುರಳಿಧರನ್ ಅವರನ್ನು ಚಕ್ಕರ್ ಎಂದು ಜರೆದ ಬಳಿಕ ಎರಡು ತಂಡಗಳ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳ ನಡುವೆ ಸಂಬಂಧಗಳು ಅಷ್ಟು ಚೆನ್ನಾಗಿ ಉಳಿದಿಲ್ಲ. ಕಳೆದ ಒಂದು ದಶಕದಿಂದ ನಿರಂತರವಾಗಿ ಹದಗೆಡುತ್ತಿರುವ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ಪಿನ್ನರಗಳಿಬ್ಬರ ಹೆಸರಿನಲ್ಲಿ ಟೂರ್ನಿಯೊಂದನ್ನು ಪ್ರಾರಂಭಿಸುವ ಯೋಜನೆಯನ್ನು ಸಿದ್ಧಮಾಡಿದೆ.

ಆಸ್ಟ್ರೇಲಿಯದ ಕ್ರಿಕೆಟ್ ಪ್ರೇಮಿಗಳು ತನ್ನನ್ನು ಜರೆಯಬಹುದು ಎನ್ನುವ ಹೆದರಿಕೆಯಿಂದ ಕಳೆದ ಬಾರಿ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಅವರು ಪ್ರವಾಸ ಮಾಡಿರಲಿಲ್ಲ. ಅಲ್ಲದೇ ಆ ಸಮಯದಲ್ಲಿ ಮುರಳಿಯನ್ನು ಹಿಯಾಳಿಸುವ ರೀತಿಯಲ್ಲಿ ಆಸ್ಟ್ರೇಲಿಯದ ಪ್ರಧಾನಿ ಜಾನ್ ಹೊವಾರ್ಡ್ ಕೂಡ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ