ವಿಜೃಂಭಿಸಿದ ವಿರಾಟ್: ಭಾರತಕ್ಕೆ ಬಾಗಿದ ಬಾಂಗ್ಲಾ

ಗುರುವಾರ, 27 ಫೆಬ್ರವರಿ 2014 (10:54 IST)
PTI
ನಾಯಕ ವಿರಾಟ್ ಕೊಹ್ಲಿಯ ಅದ್ಭುತ ಶತಕದ ನೆರವಿನಿಂದ ಭಾರತ ಬಾಂಗ್ಲಾದೇಶದ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಿದೆ.

280 ರನ್ ಗಳ ಗುರಿ ಬೆನ್ನಟ್ಟಿದ ಭಾರತ, ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಡುವಿನ 213 ರನ್ಗಳ ಜೊತೆಯಾಟದಿಂದ ಏಷ್ಯಾಕಪ್ ನಲ್ಲಿ ಶುಭಾರಂಭ ಮಾಡಿತು. 122 ಬಾಲ್ ಗಳಲ್ಲಿ 136 ರನ್ ದಾಖಲಿಸಿದ ವಿರಾಟ್ ರ 19 ನೇ ಶತಕದಲ್ಲಿ 16 ಬೌಂಡರಿ ಮತ್ತು ಎರಡು ಸಿಕ್ಸರ್ ಗಳಿದ್ದವು.

ಕೊಹ್ಲಿಗೆ ಸಾಥ ನೀಡಿದ ರಹಾನೆ 73 ರನ್ ಗಳಿಸಿದರು. ಭಾರತೀಯರು 49 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿದರು.

ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಒಬ್ಬರ ಹಿಂದೆ ಒಬ್ಬರು ಔಟಾದಾಗ ಭಾರತದ ಸ್ಥಿತಿ ಚಿಂತಾಜನಕವಾಗಿತ್ತು.

ಭಾರತಕ್ಕೆ ಉತ್ತಮ ಆರಂಭ ನೀಡಿದ್ದ ಶಿಖರ್ (28) ಮತ್ತು ರೋಹಿತ್ (21) ಕ್ರಮವಾಗಿ 11 ಮತ್ತು 12 ನೇ ಓವರ್ ನಲ್ಲಿ ಪೆವಿಲಿಯನ್ ಗೆ ಮರಳಿದರು. ಆದರೆ ನಾಯಕ ಕೊಹ್ಲಿ ಮತ್ತು ರಹಾನೆ ಜತೆಗೂಡಿ ಭಾರತವನ್ನು ವಿಜಯದೆಡೆಗೆ ಕೊಂಡೊಯ್ದರು. ಕ್ರಮವಾಗಿ 9 ಮತ್ತು 2 ರನ್ ಗಳಿಸಿದ ರಾಯುಡು ಮತ್ತು ಕಾರ್ತೀಕ್ ಅಜೇಯರಾಗುಳಿದರು.

ಆರಂಭಿಕ ಆಘಾತ ಅನುಭವಿಸಿದ್ದ ಬಾಂಗ್ಲಾದೇಶಕ್ಕೆ ಆಸರೆ ನೀಡಿದ ಮುಷ್ಫಿಕ್ ಉರ್ ರಹೀಂ 117 (113) ರನ್ ಗಳಿಸಿದರೆ, ಅನಾಮುಲ್ ಹಕ್ 77 ರನ್ ಗೆ ವಿಕೆಟ್ ಒಪ್ಪಿಸಿದರು. ಇವರಿಬ್ಬರ ಜತೆಯಾಟದ ನೆರವಿನಿಂದ ಆತಿಥೇಯರು 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 270 ರನ್ ನ್ನು ಪೇರಿಸಿದ್ದರು.

ಭಾರತದ ಪರ ಭುವನೇಶ್ವರ್, ವರುನ್, ಅಶ್ವಿನ್ ತಲಾ 1 ವಿಕೆಟ್ ಪಡೆದರೆ 50 ರನ್ ನೀಡಿ 4 ವಿಕೆಟ್ ಗಳಿಸಿದ ಶಮಿ ಯಶಸ್ವಿ ಬೌಲರ್ ಎನಿಸಿದರು.

ವೆಬ್ದುನಿಯಾವನ್ನು ಓದಿ