ವಿಶ್ವಕ್ರಿಕೆಟಿನಲ್ಲಿ ನಿಜಕ್ಕೂ ನಂಬರ್ 1 ಯಾರು?

ಶನಿವಾರ, 3 ಜನವರಿ 2009 (19:52 IST)
ಟೀಮ್ ಇಂಡಿಯಾ ವಿಶ್ವಕ್ರಿಕೆಟಿನಲ್ಲಿ ಸೂಪರ್ ಪವರ್ ತೋರಿಸುತ್ತಿರುವಂತೆಯೇ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ನಂಬರ್ ವನ್ ಸ್ಥಾನದತ್ತ ದಾಪುಗಾಲು ಹಾಕುತ್ತಿರುವ ದಕ್ಷಿಣ ಆಫ್ರಿಕಾ ಕೂಡ ಪ್ರಭಾವೀ ತಂಡವಾಗಿ ಕಂಡು ಬರುತ್ತಿದೆ. ಚಾಂಪಿಯನ್ ತಂಡವನ್ನು ಅವರದೇ ನೆಲದಲ್ಲಿ ಮಣ್ಣು ಮುಕ್ಕಿಸಿ ದಾಖಲೆ ಮಾಡುತ್ತಿರುವ ದ. ಆಫ್ರಿಕಾ ನಂಬರ್ ವನ್ ಸ್ಥಾನಕ್ಕೇರಲು ಬೇಕಾಗಿರುವುದು ಕೇವಲ ಒಂದು ಟೆಸ್ಟ್ ವಿಜಯ ಮಾತ್ರ.

ಹಾಗಾದರೆ ಪ್ರದರ್ಶನದ ಆಧಾರದಲ್ಲಿ ನಿಜಕ್ಕೂ ನಂಬರ್ ವನ್ ಯಾರು? ಅಥವಾ ಯಾರು ನಂಬರ್ ವನ್ ಆಗುತ್ತಾರೆ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳಲ್ಲಿ ಸಹಜ. ಈ ನಿಟ್ಟಿನಲ್ಲಿ ನಡೆದಿರುವ ಲೆಕ್ಕಾಚಾರಗಳನ್ನು ಅವಲೋಕಿಸಿದಾಗ ಅಗ್ರ ಸ್ಥಾನಕ್ಕೇರಲು ಭಾರತ ಇನ್ನೂ ಹೆಚ್ಚಿನ ಶ್ರಮವಹಿಸ ಬೇಕಾಗಿದೆ ಎಂಬುದು ಕಂಡು ಬರುತ್ತದೆ. ಕೆಳಗೆ ಕೊಡಲಾಗಿರುವ ಅಂಕಿ-ಅಂಶಗಳನ್ನು ಓದಿದಲ್ಲಿ ನಿಮಗೆ ಎಲ್ಲವೂ ಸ್ಪಷ್ಟವಾಗಲಿದೆ.

2008ರಲ್ಲಿ ಭಾರತ ಆಡಿದ ಒಟ್ಟು ಟೆಸ್ಟ್‌ಗಳು 15. ಅವುಗಳಲ್ಲಿ ತಾಯ್ನೆಲದಲ್ಲಿ ನಡೆದ 9 ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿದ್ದು 4ರಲ್ಲಿ ಮಾತ್ರ. 4 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದರೆ 1 ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರಾಜಯಗೊಂಡಿದೆ. ಇದರ ಲೆಕ್ಕಾಚಾರದ ಪ್ರಕಾರ ಭಾರತದ ಯಶಸ್ಸಿನ ಸರಾಸರಿ 66.67% ಮಾತ್ರ.

2008ರಲ್ಲಿ ದಕ್ಷಿಣ ಆಫ್ರಿಕಾ ಕೂಡ 15 ಟೆಸ್ಟ್ ಆಡಿದೆ. ತಾಯ್ನೆಲದಲ್ಲಿ ನಡೆದ 4 ಟೆಸ್ಟ್‌ಗಳಲ್ಲಿ ನಾಲ್ಕನ್ನೂ ಗೆದ್ದುಕೊಂಡಿದ್ದು ಯಶಸ್ಸಿನ ಸರಾಸರಿ 100.

ಭಾರತ ವಿದೇಶಗಳಲ್ಲಿ ಆಡಿದ ಟೆಸ್ಟ್ ಒಟ್ಟು 6 ಮಾತ್ರ. ಅವುಗಳಲ್ಲಿ 2 ಗೆಲುವು, 3 ಸೋಲು ಹಾಗೂ ಒಂದು ಡ್ರಾದಲ್ಲಿ ಅಂತ್ಯಗೊಂಡಿತ್ತು. ಇದರ ಸರಾಸರಿ 41.67 ಮಾತ್ರ.

ದಕ್ಷಿಣ ಆಫ್ರಿಕಾ ವಿದೇಶಗಳಲ್ಲಿ 11 ಟೆಸ್ಟ್ ಆಡಿದ್ದು 7ರಲ್ಲಿ ಜಯ ದಾಖಲಿಸಿದೆ. ಸೋತದ್ದು 2ರಲ್ಲಿ ಮಾತ್ರ. 2 ಡ್ರಾದಲ್ಲಿ ಮುಗಿದಿತ್ತು. ಇದರ ಪ್ರಕಾರ ಸರಾಸರಿ 72.73 ಶೇಕಡಾ.

ಒಟ್ಟು ಲೆಕ್ಕಾಚಾರದ ಪ್ರಕಾರ ಭಾರತ ಆಡಿದ 15 ಟೆಸ್ಟ್‌ಗಳಲ್ಲಿ 6ನ್ನು ಗೆದ್ದಿದ್ದು, 4ರಲ್ಲಿ ಸೋಲು ಮತ್ತು 5 ಟೆಸ್ಟ್ ಡ್ರಾದಲ್ಲಿ ಮುಗಿದಿದೆ. ಆ ಪ್ರಕಾರ ಸರಾಸರಿ 56.67 ದಾಖಲಾಗಿದೆ.

ಅದೇ ದಕ್ಷಿಣ ಆಫ್ರಿಕಾ ಆಡಿದ 15 ಟೆಸ್ಟ್‌ಗಳ ಪೈಕಿ 11ರಲ್ಲಿ ವಿಜಯ, 2 ಸೋಲು ಮತ್ತು 2 ಡ್ರಾ ಮಾಡಿಕೊಂಡಿತ್ತು. ಆ ಮ‌ೂಲಕ ಸರಾಸರಿ 80 ಶೇಕಡಾ ಕಂಡು ಬಂದಿದೆ.

ಇತ್ತಂಡಗಳ ಬ್ಯಾಟಿಂಗ್ ಟಾಪ್ 10...
ಬ್ಯಾಟಿಂಗ್ ವಿಭಾಗದಲ್ಲಿ ಕಣ್ಣು ಹಾಯಿಸಿದಾಗ ಅಗ್ರ 10 ರನ್ ಗಳಿಕೆಯ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕು ಮಂದಿ ದಾಂಡಿಗರು ಹೆಸರು ದಾಖಲಿಸಿದ್ದಾರೆ. ಅದೇ ರೀತಿ ಭಾರತದ ಪರವಾಗಿಯೂ ಅಗ್ರ 10ರಲ್ಲಿ ನಾಲ್ಕು ಮಂದಿ ದಾಂಡಿಗರಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಕಪ್ತಾನ ಗ್ರೇಮ್ ಸ್ಮಿತ್ 2008ರಲ್ಲಿನ 15 ಟೆಸ್ಟ್‌ಗಳಿಂದ ಒಟ್ಟು 1656 ರನ್ ಗಳಿಸಿ ನಂಬರ್ ವನ್ ಸ್ಥಾನ, ಹಶೀಮ್ ಆಮ್ಲಾ 15 ಟೆಸ್ಟ್‌ಗಳಿಂದ 1161 ರನ್ ಗಳಿಸಿ ನಾಲ್ಕನೇ ಸ್ಥಾನ, ನೀಲ್ ಮೆಕೆಂಜಿ 14 ಟೆಸ್ಟ್‌ಗಳಿಂದ 1073 ರನ್ ಗಳಿಸಿ 7ನೇ ಸ್ಥಾನ ಹಾಗೂ ಎಬಿ ಡೇ ವಿಲ್ಲರ್ಸ್ 15 ಟೆಸ್ಟ್‌ಗಳಿಂದ 1061 ರನ್ ಗಳಿಸಿ 10ನೇ ಸ್ಥಾನದಲ್ಲಿದ್ದಾರೆ.

ಭಾರತದ ಪಟ್ಟಿಯನ್ನು ನೋಡಿದಾಗ ಎರಡನೇ ಸ್ಥಾನ ಭಾರತ ವೀರೇಂದ್ರ ಸೆಹ್ವಾಗ್‌ರದ್ದು. ಅವರು 2008ರಲ್ಲಿನ 14 ಟೆಸ್ಟ್‌ಗಳಿಂದ 1462 ಕೂಡಿ ಹಾಕಿದ್ದರು. 8 ಟೆಸ್ಟ್‌ಗಳಿಂದ 1134 ರನ್ ಕಲೆ ಹಾಕಿದ ಗೌತಮ್ ಗಂಭೀರ್ ಐದನೇ ಸ್ಥಾನದಲ್ಲಿದ್ದಾರೆ. 15 ಟೆಸ್ಟ್‌ಗಳಲ್ಲಿ ಆಡಿರುವ ವಿವಿಎಸ್ ಲಕ್ಷ್ಮಣ್ 6ನೇ ಸ್ಥಾನದಲ್ಲಿದ್ದು 1086 ರನೇ ಪೇರಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 9ನೇ ಸ್ಥಾನದಲ್ಲಿದ್ದು ಅವರು 13 ಟೆಸ್ಟ್‌ಗಳಿಂದ 1063 ರನ್ ದಾಖಲಿಸಿದ್ದಾರೆ.

ಇತ್ತಂಡಗಳ ಬೌಲಿಂಗ್ ಟಾಪ್ 10...
ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಮ‌ೂರು ಮಂದಿ ಹಾಗೂ ಭಾರತದ ಕೇವಲ ಒಬ್ಬ ಮಾತ್ರ ಅಗ್ರ 10ರ ಬೌಲಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ 13 ಟೆಸ್ಟ್‌ಗಳಿಂದ 74 ವಿಕೆಟ್ ಕಿತ್ತಿದ್ದು ನಂಬರ್ ವನ್ ಸ್ಥಾನದಲ್ಲಿದ್ದಾರೆ. 15 ಟೆಸ್ಟ್‌ಗಳಿಂದ 54 ವಿಕೆಟ್ ಪಡೆದಿರುವ ಮಖಾಯ ಎನ್‌ಟಿನಿಯದ್ದು 6ನೇ ಸ್ಥಾನ. ಮೋರ್ನೆ ಮೋರ್ಕೆಲ್ 43 ವಿಕೆಟ್ ಪಡೆದಿದ್ದು 13 ಟೆಸ್ಟ್‌ಗಳಲ್ಲಿ ಅವರು ಭಾಗಿಯಾಗಿದ್ದರು. ಪಟ್ಟಿಯಲ್ಲಿ ಅವರ ಸ್ಥಾನ 9ನೇಯದ್ದು.

ಭಾರತದ ಪಟ್ಟಿಯಲ್ಲಿ 10ರೊಳಗೆ ಹರಭಜನ್ ಸಿಂಗ್ ಮಾತ್ರ ಕಾಣಸಿದ್ದಾರೆ. ಅವರು 13 ಟೆಸ್ಟ್‌ಗಳಿಂದ 63 ವಿಕೆಟ್ ಪಡೆದಿದ್ದು ನಂಬರ್ 3 ಪಟ್ಟವನ್ನೇರಿದ್ದಾರೆ.

ವೆಬ್ದುನಿಯಾವನ್ನು ಓದಿ