ಶ್ರೀನಿವಾಸನ್‌ ವಿರುದ್ಧ ಪವಾರ್ ಪರೋಕ್ಷ ವಾಗ್ಧಾಳಿ

ಗುರುವಾರ, 30 ಮೇ 2013 (14:51 IST)
PTI
ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 6ನೇ ಆವೃತ್ತಿಯ ಎಲ್ಲಾ ಐಪಿಎಲ್‌ ಟಿ-20 ಪಂದ್ಯಗಳನ್ನು ಗೃಹ ಸಚಿವಾಲಯ ತನಿಖೆ ನಡೆಸಬೇಕು ಎಂದು ಐಸಿಸಿ ಮತ್ತು ಬಿಸಿಸಿಐನ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಶರದ್‌ ಪವಾರ್‌ ಆಗ್ರಹಿಸಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಹಾಜರಾದ ಶರದ್‌ ಪವಾರ್‌ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸನ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

ಐಪಿಎಲ್‌ನಲ್ಲಿ ಈ ಬಾರಿ ಆಡಲಾದ ಎಲ್ಲಾ 75 ಪಂದ್ಯಗಳನ್ನು ಕೇಂದ್ರ ಗೃಹ ಸಚಿವಾಲಯದಿಂದ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರ ಬೀಳುತ್ತದೆ ಎಂದರು.

ಬಿಸಿಸಿಐ ತನಿಖೆ ನಡೆಸುವಂತೆ ಸರಕಾರಕ್ಕೆ ಪತ್ರ ಬರೆದರೆ, ಗೃಹ ಸಚಿವಾಲಯ ಎಲ್ಲಾ ಪಂದ್ಯಗಳನ್ನು ತನಿಖೆ ನಡೆಸಬಹುದು. ಆಗ ಯಾರನ್ನೂ ಬೇಕಾದರೂ ವಿಚಾರಣೆಗೊಳಪಡಿಸುವ ಅಧಿಕಾರ ಸರಕಾರಕ್ಕೆ ಸಂವಿಧಾನಬದ್ಧವಾಗಿ ದೊರೆಯುತ್ತದೆ ಎಂದು ಪವಾರ್‌ ವಿವರಿಸಿದರು.

ಪ್ರಸ್ತುತ ಪ್ರಕರಣದ ಗಂಭೀರತೆಯನ್ನು ಬಿಸಿಸಿಐ ಅರ್ಥ ಮಾಡಿಕೊಂಡಿಲ್ಲ ಎಂದು ಅನಿಸುತ್ತಿದೆ. ಸರಕಾರದ ಮಧ್ಯ ಪ್ರವೇಶವನ್ನು ಬಿಸಿಸಿಐ ಬಯಸುವುದಿಲ್ಲ. ಹಾಗಾಗಿ ತಮ್ಮದೇ ಪ್ರತ್ಯೇಕ ತನಿಖಾ ಸಂಸ್ಥೆ ನಡೆಸಲಿ ಎಂದು ಹೇಳಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಯಾರಾದರೂ ಒಬ್ಬರು ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಐಪಿಎಲ್‌ ಮುಂದುವರಿಸಬೇಕು ಎಂದ ಅವರ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್‌ ಕೆಳಗಿಳಿಯಬೇಕು ಎಂಬ ಬಗ್ಗೆ ವೈಯಕ್ತಿಕವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದೆ. ಇದನ್ನು ಸರಿಪಡಿಸಬೇಕಾದರೆ ಯಾರಾದರೂ ಒಬ್ಬರು ಜವಾಬ್ದಾರಿ ಹೊತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪವಾರ್‌ ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ