ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್: ರಾಯಲ್ಸ್‌ಗೆ ಜಯ

ಮಂಗಳವಾರ, 30 ಏಪ್ರಿಲ್ 2013 (14:22 IST)
PTI
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರರ ಮುಂದೆ 18 ವರ್ಷದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಆಟ ಇಡೀ ಕ್ರೀಡಾಂಗಣದ ಕೇಂದ್ರಬಿಂದುವಾಯಿತು. ಈ ಆಟಗಾರನ ಬ್ಯಾಟಿಂಗ್ ಬಲದಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ನಾಲ್ಕು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ಸ್ ನಾಯಕ ರಾಹುಲ್ ದ್ರಾವಿಡ್ ಆರ್‌ಸಿಬಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಆರ್‌ಸಿಬಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ ದ್ರಾವಿಡ್ ನಿರ್ಧಾರ ಕೆಲ ಕ್ರಿಕೆಟ್ ಪ್ರಿಯರ ಅಚ್ಚರಿಗೂ ಕಾರಣವಾಯಿತು. ಕೊನೆಯಲ್ಲಿ ರಾಯಲ್ಸ್ ವಿಜಯ ವೇದಿಕೆ ಮೇಲೆ ನಿಂತು ಸಂಭ್ರಮಿಸಿದಾಗ ದ್ರಾವಿಡ್ `ತಂತ್ರ' ಏನೆಂಬುದು ಎಲ್ಲರಿಗೂ ಮನವರಿಕೆಯಾಯಿತು.

ಉತ್ತಮ ಆರಂಭ ಪಡೆದ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ171 ರನ್‌ಗಳನ್ನು ಗಳಿಸಿತು. ಈ ಗುರಿಯನ್ನು ರಾಯಲ್ಸ್ ಒಂದು ಎಸೆತ ಬಾಕಿ ಇರುವಂತೆಯೇ ಆರು ವಿಕೆಟ್ ಕಳೆದುಕೊಂಡು ತಲುಪಿತು.

ಸ್ಯಾಮ್ಸನ್ ಸಂಭ್ರಮ: ಐಪಿಎಲ್‌ನಲ್ಲಿ ಎರಡನೇ ಪಂದ್ಯವನ್ನಾಡಿದ ಕೇರಳದ ಸ್ಯಾಮ್ಸನ್ ಅರ್ಧಶತಕ ಗಳಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದ್ರಾವಿಡ್ 22 ರನ್ ( 17 ಎಸೆತ, 4ಬೌಂಡರಿ) ಗಳಿಸಿದರೆ, ಅಜಿಂಕ್ಯ ರಹಾನೆ ಎರಡು ರನ್ ಪೇರಿಸಿ ರವಿ ರಾಂಪಾಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ರಹಾನೆ ಔಟಾದ ನಂತರ ಕ್ರೀಸ್‌ಗೆ ಬಂದ ಸ್ಯಾಮ್ಸನ್ 41 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಅಮೋಘ ಸಿಕ್ಸರ್‌ಗಳ ನೆರವಿನಿಂದ 63 ರನ್ ಗಳಿಸಿದರು. ಈ ವೇಳೆ ಹೆನ್ರಿಕ್ಸ್ ಎಸೆತದಲ್ಲಿ ದ್ರಾವಿಡ್ ಕೂಡಾ ಪೆವಿಲಿಯನ್ ಸೇರಿದರು. ಈ ಸಂದರ್ಭ ರಾಯಲ್ಸ್ ಮೇಲೆ ಆತಂಕದ ಕಾರ್ಮೋಡ. ಆದರೆ, ಯುವ ಬ್ಯಾಟ್ಸ್‌ಮನ್ ಸ್ಯಾಮ್ಸನ್ ಎಂಟನೇ ಓವರ್‌ನಲ್ಲಿ ಮುರಳಿ ಕಾರ್ತಿಕ್ ಎಸೆತದ ಮೊದಲ ಎರಡೂ ಎಸೆತವನ್ನೂ ಸಿಕ್ಸರ್ ಸಿಡಿಸಿ ಆತಂಕದಲ್ಲಿದ್ದ ವಾತಾವರಣವನ್ನು ತಿಳಿಗೊಳಿಸಿದರು.

ವಿಕೆಟ್ ಕೀಪರ್ ದಿಶಾಂತ್ ಯಾಗ್ನಿಕ್ ಬದಲು ಸ್ಥಾನ ಗಳಿಸಿದ್ದ ಸ್ಯಾಮ್ಸನ್ ಎದುರಾಳಿ ತಂಡದ ಅನುಭವಿ ಬೌಲರ್‌ಗಳಾದ ರವಿ ರಾಂಪಾಲ್, ಆರ್.ಪಿ. ಸಿಂಗ್ ಹಾಗೂ ವಿನಯ್ ಕುಮಾರ್ ಅವರ ಎಸೆತಗಳನ್ನು ದಿಟ್ಟತನದಿಂದ ಎದುರಿಸಿದರು. ಶೇನ್ ವ್ಯಾಟ್ಸನ್ (41, 31ಎ, 3 ಬೌ, 1 ಸಿ) ಮತ್ತು ಬ್ರಾಡ್ ಹಾಡ್ಜ್ (32, 18ಎ, 1ಬೌಂಡರಿ, 2 ಸಿಕ್ಸರ್) ಕೂಡಾ ರಾಯಲ್ಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ರಾಯಲ್ಸ್ ಗೆಲುವಿಗೆ ಕೊನೆಯ ಓವರ್‌ನಲ್ಲಿ ಆರು ರನ್‌ಗಳ ಆಗತ್ಯವಿತ್ತು. ನಾಯಕ ಕೊಹ್ಲಿ ಧೈರ್ಯ ಮಾಡಿ ವಿನಯ್ ಕೈಗೆ ಚೆಂಡು ನೀಡಿದರಾದರೂ, `ದಾವಣೆಗೆರೆ ಎಕ್ಸ್‌ಪ್ರೆಸ್' ನಾಲ್ಕು ಎಸೆತಗಳಲ್ಲಿ ಮೂರು ರನ್ ನೀಡಿ 2 ವಿಕೆಟ್‌ಗಳನ್ನು ಉರುಳಿಸಿದರು. ಆದರೆ, 19.5 ನೇ ಓವರ್‌ನಲ್ಲಿ ಕನ್ನಡಿಗ ವಿನಯ್ ಎಸೆತವನ್ನು ಇನ್ನೊಬ್ಬ ಕನ್ನಡಿಗ ಸ್ಟುವರ್ಟ್ ಬಿನ್ನಿ ಬೌಂಡರಿಗೆ ಅಟ್ಟಿ ರಾಯಲ್ಸ್ ಒಡತಿ ಶಿಲ್ಪಾ ಶೆಟ್ಟಿ ಮೊಗದಲ್ಲಿ ತುಂಬಿದ್ದ ಆತಂಕವನ್ನು ದೂರ ಮಾಡಿದರು.

ನಿರಾಸೆಗೊಳಿಸದ ಗೇಲ್: ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರ ಗೇಲ್ (34, 16ಎಸೆತ, 6ಬೌಂಡರಿ, 1 ಸಿಕ್ಸರ್) ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮೊದಲ ಓವರ್‌ನಲ್ಲಿಯೇ ಮೂರು ಬೌಂಡರಿಗಳನ್ನು ಸಿಡಿಸಿದರು. ಆದರೆ, ವಾಟ್ಸನ್ ಓವರ್‌ನಲ್ಲಿ ಗೇಲ್ ಔಟಾಗುತ್ತಿದ್ದಂತೆ ರಾಯಲ್ಸ್ ಆಟಗಾರರು ಅರ್ಧ ಪಂದ್ಯ ಗೆದ್ದಂತೆಯೇ ಸಂಭ್ರಮಿಸಿದರು.

ವಿರಾಟ್ ಕೊಹ್ಲಿ (32, 35ಎಸೆತ, 3 ಬೌಂ), ಡಿವಿಲಿಯರ್ಸ್, ಮೊಯಿಸ್ ಹೆನ್ರಿಕ್ಸ್ ಸೇರಿ ಉತ್ತಮ ಮೊತ್ತವನ್ನೇ ಕಲೆ ಹಾಕಿದರಾದರೂ, ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಆರ್‌ಸಿಬಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಈ ಗೆಲುವಿನ ಮೂಲಕ ರಾಯಲ್ಸ್ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ್ದ ಸೋಲಿಗೆ `ಮುಯ್ಯಿ' ತೀರಿಸಿಕೊಂಡಿತು.

ವೆಬ್ದುನಿಯಾವನ್ನು ಓದಿ