ಸಚಿನ್ ತೆಂಡೂಲ್ಕರ್ ನಿವೃತ್ತಿಯ ತವಕ ಅನುಚಿತ: ಬಿಸಿಸಿಐ

ಮಂಗಳವಾರ, 26 ಮಾರ್ಚ್ 2013 (12:21 IST)
PTI
ಸಚಿನ್‌ ತೆಂಡುಲ್ಕರ್‌ ಓರ್ವ ವಿಭಿನ್ನ ವ್ಯಕ್ತಿ ಹಾಗೂ ಕ್ರಿಕೆಟಿಗ. ಅವರ ನಿವೃತ್ತಿ ಕುರಿತು ಯಾವುದೇ ರೀತಿಯ ಹೇಳಿಕೆ ನೀಡುವುದು ಅನುಚಿತ ಎನಿಸಿಕೊಳ್ಳುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಹೇಳಿದ್ದಾರೆ.

'ತೆಂಡುಲ್ಕರ್‌ ಇತರೆಲ್ಲರಿಗಿಂತ ವಿಭಿನ್ನ. ಭಾರತದ ಈ ಮಹಾನ್‌ ಕ್ರಿಕೆಟಿಗನ ನಿವೃತ್ತಿ ಕುರಿತು ಮಾತಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಎಲ್ಲ ಹೇಳಿಕೆಗಳೂ ಅನುಚಿತವೆನಿಸಿಕೊಳ್ಳುತ್ತವೆ...' ಎಂದು ಬಿಸಿಸಿಐ ಬಾಸ್‌ ಹೇಳಿದರು.

ರವಿವಾರ ಮುಗಿದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸಚಿನ್‌ ತೆಂಡುಲ್ಕರ್‌ ಅವರ ಬ್ಯಾಟಿಂಗ್‌ ಫಾರ್ಮ್ ಕೈಕೊಟ್ಟದ್ದು ಹಾಗೂ ಸದ್ಯ ಭಾರತಕ್ಕೆ ಯಾವುದೇ ಟೆಸ್ಟ್‌ ಸರಣಿ ಇಲ್ಲದಿರುವುದರಿಂದ ಮಾಸ್ಟರ್‌ಬ್ಲಾಸ್ಟರ್‌ ನಿವೃತ್ತಿ ಕುರಿತು ಮಾಧ್ಯಮಗಳು ಮತ್ತೂಂದು ಕಂತಿನ ಚರ್ಚೆ ಆರಂಭಿಸಿವೆ. ಹೊಸದಿಲ್ಲಿ ಟೆಸ್ಟ್‌ ಪಂದ್ಯ ತೆಂಡುಲ್ಕರ್‌ ಆಡುತ್ತಿರುವ ತವರಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಒಟ್ಟಾರೆ ತೆಂಡುಲ್ಕರ್‌ ನಿವೃತ್ತಿಗೆ ಅವರಿಗಿಂತ ಹೆಚ್ಚಿನ ಅವಸರ ಮಾಧ್ಯಮಗಳಿಗೆ ಇರುವುದು ಸ್ಪಷ್ಟ!

ಈ ಎಲ್ಲ ಬೆಳವಣಿಗೆಗೆ ಸಂಬಂಧಿಸಿದಂತೆ ಸೋಮವಾರದ ಟಿವಿ ಸಂದರ್ಶನವೊಂದರಲ್ಲಿ ಶ್ರೀನಿವಾಸನ್‌ 'ಭಾರತೀಯ ಬ್ಯಾಟಿಂಗ್‌ ಲೆಜೆಂಡ್‌' ಪರ ಬ್ಯಾಟ್‌ ಬೀಸಿದರು. ಈ ಸಂದರ್ಭದಲ್ಲಿ ಅವರ ನಿವೃತ್ತಿ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ಸಲ್ಲದು ಎಂಬ ರೀತಿಯಲ್ಲಿ ಮಾತಾಡಿದರು. ಸಚಿನ್‌ ಭವಿಷ್ಯದ ಬಗ್ಗೆ ನಿರ್ಧರಿಸುವು ನಾನಲ್ಲ, ಇದನ್ನು ಆಯ್ಕೆಗಾರರು ನೋಡಿಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಕ್ಕೆ ವೈಟ್‌ವಾಶ್‌ ಬಳಿದ ಧೋನಿ ಬಳಗದ ಸಾಧನೆಯನ್ನು ಶ್ಲಾ ಸಿದರು. ಇಂಗ್ಲಂಡ್‌ ವಿರುದ್ಧ ಅನುಭವಿಸಿದ ಸರಣಿ ಸೋಲನ್ನು ಸಮರ್ಥಿಸಿಕೊಂಡರು.

'ಇಂಗ್ಲಂಡ್‌ ಎದುರು ಆಡುವಾಗ ನಮ್ಮ ತಂಡ ಪರಿವರ್ತನೆಯ ಹಾದಿಯಲ್ಲಿತ್ತು. ಅದೃಷ್ಟ ಕೂಡ ಕೈಕೊಟ್ಟಿತ್ತು. ಆಸ್ಟ್ರೇಲಿಯ ವಿರುದ್ಧ ಆಡುವಾಗ ತಂಡ ಪುನರ್‌ ಸಂಘಟನೆಗೊಂಡಿತು. ಇದಕ್ಕಾಗಿ ನಾವು ಹೆಮ್ಮೆ ಪಡಬೇಕು. ಯಾವುದೇ ತಂಡ ಸೋಲಲು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿ ವ್ಯತಿರಿಕ್ತವಾಗಿರುತ್ತದೆ. ಇಂಗ್ಲಂಡ್‌ ಎದುರು ನಮ್ಮೆಲ್ಲ ಆಟಗಾರರೂ ಗರಿಷ್ಠ ಪ್ರಯತ್ನ ಮಾಡಿದ್ದನ್ನು ಮರೆಯುವಂತಿಲ್ಲ...' ಎಂದರು.

'ಆಸ್ಟ್ರೇಲಿಯ ವಿರುದ್ಧ ಭಾರತ ಅಧಿಕಾರಯುತ ಜಯ ಸಾಧಿಸಿದೆ. ನಮಗೆ ನಾಯಕನಲ್ಲಿ ವಿಶ್ವಾಸವಿದೆ. ತಂಡದ ಆಟಗಾರರ ಮೇಲೆ ನಂಬಿಕೆ ಇದೆ. ಇದು ಈಗ ಸಾಬೀತಾಗಿದೆ' ಎಂದ ಶ್ರೀನಿವಾಸನ್‌, ಆದರೆ ಭಾರತಕ್ಕೆ ನಿಜವಾದ ಸವಾಲು ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲಂಡ್‌ ಪ್ರವಾಸದ ವೇಳೆ ಎದುರಾಗಲಿದೆ ಎಂಬುದನ್ನು ಹೇಳಲು ಮರೆಯಲಿಲ್ಲ.

ಐಪಿಎಲ್‌ ಹಾಗೂ ಶ್ರೀಲಂಕಾ ಆಟಗಾರರ ಕುರಿತೂ ಶ್ರೀನಿವಾಸನ್‌ ಅಭಯವಿತ್ತರು. ಐಪಿಎಲ್‌ನಲ್ಲಿ ಶ್ರೀಲಂಕಾ ಆಟಗಾರರ ಭದ್ರತೆ ಬಗ್ಗೆ ಯಾವುದೇ ಅನುಮಾನ ಬೇಡ. ಕ್ರಿಕೆಟ್‌ ಪಾಲಿಗೆ ಭಾರತ ಸುರಕ್ಷಿತ ದೇಶ. ತಮಿಳುನಾಡಿನಲ್ಲಿ ಕಾನೂನು ಶಿಸ್ತು ಬಗ್ಗೆ ಯಾವುದೇ ಸಮಸ್ಯೆಗಳಿಲ್ಲ. ಅಕಸ್ಮಾತ್‌ ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಾವು ನಿಭಾಯಿಸಬಲ್ಲೆವು ಎಂದರು.

ವೆಬ್ದುನಿಯಾವನ್ನು ಓದಿ