ಸರಣಿ ಗೆಲ್ಲಲು ಮತ್ತಷ್ಟು ಶಿಸ್ತಿನ ಆಟ ಅಗತ್ಯ: ಧೋನಿ

ಶುಕ್ರವಾರ, 31 ಡಿಸೆಂಬರ್ 2010 (17:41 IST)
ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ದಾಖಲಿಸುವ ನಿಟ್ಟಿನಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಮತ್ತಷ್ಟು ಶಿಸ್ತಿನ ಆಟ ಹೊರಬರಬೇಕಾಗಿರುವುದು ಅವಶ್ಯವಾಗಿದೆ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 25 ರನ್ನುಗಳ ಹೀನಾಯ ಸೋಲನ್ನು ಭಾರತ ಅನುಭವಿಸಿತ್ತು. ಆದರೆ ಡರ್ಬನ್‌ನಲ್ಲಿ ದರ್ಬಾರ್ ನಡೆಸಿದ್ದ ಮಹಿ ಬಳಗ 87 ರನ್ನುಗಳ ಜಯ ದಾಖಲಿಸುವ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತ್ತು. ಇದೀಗ ಕೇಪ್‌ಟೌನ್‌ನಲ್ಲಿ ನಡೆಯಲಿರುವ ನಿರ್ಣಾಯಕ ಟೆಸ್ಟ್‌ನಲ್ಲಿ ಫಲಿತಾಂಶ ನಿರ್ಧಾರವಾಗಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಮ್ಮ ಬೌಲಿಂಗ್, ಬ್ಯಾಟಿಂಗ್ ಮತ್ತು ಫಿಲ್ಡೀಂಗ್ ವಿಭಾಗವು ಶ್ರೇಷ್ಠ ಪ್ರದರ್ಶನ ನೀಡಿದಲ್ಲಿ ಮಾತ್ರ ಗೆಲುವು ನಿರೀಕ್ಷಿಸಬಹುದು ಎಂದು ನಾಯಕ ನುಡಿದರು.

ಇಂತಹ ವಿಕೆಟುಗಳಲ್ಲಿ ನಾವು ಹೆಚ್ಚು ಆಡಿದ ಅನುಭವ ಹೊಂದಿಲ್ಲ. ಹೀಗಾಗಿ ನಮಗಿದು ಸವಾಲಿನ ಪಂದ್ಯವಾಗಿರಲಿದೆ. ಎಲ್ಲವೂ ನಾವು ನಿರೀಕ್ಷಿಸಿದಂತೆ ಸಾಗಲ್ಲ ಎಂಬುದು ನಮಗೆ ತಿಳಿದಿದೆ. ಹೀಗಿದ್ದರೂ ಎಲ್ಲ ಆಟಗಾರರು ಶ್ರೇಷ್ಠ ನಿರ್ವಹಣೆ ನೀಡುವ ಇರಾದೆಯಲ್ಲಿದ್ದಾರೆ ಎಂದವರು ಸೇರಿಸಿದರು.

ಸೆಂಚುರಿಯನ್‌ನಲ್ಲಿ ಎದುರಾದ ಸೋಲಿನ ನಂತರ ಎದುರಾಳಿ ತಂಡದ ಎಲ್ಲ 20 ವಿಕೆಟ್ ಕಿತ್ತುವ ಸಾಮರ್ಥ್ಯ ನಮಗಿದೆಯೇ ಎಂಬ ಆತಂಕ ಉಂಟಾಗಿತ್ತು. ಯಾವಾಗ ಪಂದ್ಯವನ್ನು ಸೋಲುತ್ತೆವೋ ಅದು ನಮ್ಮ ಮನೋಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಬೌಲರುಗಳು ಸ್ವಿಂಗ್ ಮಾಡಬಲ್ಲರು. ಆದರೆ ಸಹಜ ಪ್ರತಿಭೆ ಹೊಂದಿಲ್ಲ. ಹೀಗಾಗಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವುದು ಕಷ್ಟವೆನಿಸಿತ್ತು ಎಂದವರು ವಿವರಿಸಿದರು.

ಮಹತ್ವದ ಟಾಸ್ ಅದೃಷ್ಟವನ್ನಂತೂ ಪದೇ ಪದೇ ಕಳೆದುಕೊಳ್ಳುತ್ತಿದ್ದೇನೆ. ಕೆಲವೊಮ್ಮೆ ಇದು ಮುಳುವಾಗುತ್ತದೆ. ಆದರೆ ಟಾಸ್ ಗೆಲ್ಲುವುದು ಯಾವತ್ತೂ ಉತ್ತಮ. ಆ ಮೂಲಕ ವಿಕೆಟ್‌ನ ಲಾಭ ಪಡೆಯಲು ಬೌಲರುಗಳಿಗೆ ಅನುವು ಮಾಡಿಕೊಳ್ಳಬಹುದು ಎಂದು ಕಳೆದ 14 ಪಂದ್ಯಗಳಲ್ಲಿ 13 ಬಾರಿ ಟಾಸ್ ಕಳೆದುಕೊಂಡಿರುವ ಧೋನಿ ನುಡಿದರು.

ವೆಬ್ದುನಿಯಾವನ್ನು ಓದಿ