ಸುಬ್ಬಯ್ಯ ಪಿಳ್ಳೈ ಟ್ರೋಫಿ: ಕರ್ನಾಟಕದ ವಿರುದ್ಧ ತಮಿಳುನಾಡಿಗೆ ಜಯ

ಗುರುವಾರ, 6 ಮಾರ್ಚ್ 2014 (14:20 IST)
PR
PR
ತಮಿಳುನಾಡು ಕ್ರಿಕೆಟ್ ತಂಡ ಅನುಕೂಲಕರ ಪರಿಸ್ಥಿತಿ ಲಾಭ ಪಡೆದು ಕರ್ನಾಟಕ ತಂಡದ ವಿರುದ್ಧ ಏಳು ವಿಕೆಟ್ ಜಯಗಳಿಸುವ ಮೂಲಕ ಬುಧವಾರ ಸುಬ್ಬಯ್ಯ ಪಿಳ್ಳೈ ಟ್ರೋಫಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.ತಮಿಳುನಾಡು ಫೈನಲ್ ಪಂದ್ಯದಲ್ಲಿ 18 ಪಾಯಿಂಟ್ ಗಳಿಸಿದರೆ ಕರ್ನಾಟಕ ಎರಡನೇ ಸ್ಥಾನಕ್ಕೆ ಕುಸಿದಿದೆ.ಎರಡೂ ತಂಡಗಳು ಆದಾಗ್ಯೂ, ಅಖಿಲ ಭಾರತ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಸುತ್ತಿಗೆ ನೇರ ಪ್ರವೇಶ ಪಡೆದಿವೆ.ಕರ್ನಾಟಕ ಬ್ಯಾಟ್ಸ್‌ಮನ್‌ಗಳಿಗೆ ವೇಗದ ಪಿಚ್ ಸವಾಲಾಗಿ ಪರಿಣಮಿಸಿತು. ತಮಿಳುನಾಡು ಬೌಲರ್ ಎಲ್.ಬಾಲಾಜಿ ಬ್ಯಾಟ್ಸ್‌ಮನ್‌ಗಳಿಗೆ ಕಗ್ಗಂಟಾಗಿ ಪರಿಣಮಿಸಿದರು.

ಕರ್ನಾಟಕದ ಮೂರು ನಿರ್ಣಾಯಕ ಮಧ್ಯಮ ಕ್ರಮಾಂಕದ ವಿಕೆಟ್‌ಗಳನ್ನು ಬಾಲಾಜಿ ಕಬಳಿಸುವ ಮೂಲಕ ಕರ್ನಾಟಕ ತಂಡಕ್ಕೆ ಅಚ್ಚರಿ ಮೂಡಿಸಿದರು. 72ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ್ಕೆ ಬಾಲಾಜಿಯ ಬೌಲಿಂಗ್ ದಾಳಿಗೆ ಸಿಲುಕಿ 90ಕ್ಕೆ 5 ವಿಕೆಟ್ ಕಳೆದುಕೊಂಡರು.ಬಾಲಾಜಿ ಬೌಲಿಂಗ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾದರು. ಪಾಂಡೆ ಔಟಾಗಿ ಐದು ಎಸೆತಗಳಲ್ಲೇ ಬಾಲಾಜಿ ಕರುಣ್ ನಾಯರ್ ವಿಕೆಟ್ ಪಡೆದರು.
ಅದಾದ ನಂತರ ಕರ್ನಾಟಕ ಚೇತರಿಸಿಕೊಳ್ಳಲೇ ಇಲ್ಲ.ಸಿ.ಎಂ. ಗೌತಮ್ ಮಂಡಿ ನೋವಿನಿಂದ ನಿವೃತ್ತರಾದ ನಂತರ 40.3 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 168 ರನ್ ಮಾಡಿತು.ನಂತರ ಆಡಲಿಳಿದ ತಮಿಳುನಾಡು ಪರ ಎಂ. ವಿಜಯ್ ವಿನಯ್ ಕುಮಾರ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಬಲಿಯಾದರು.

ಬಾಬಾ ಅಪರಾಜಿತ್ ರಾಬಿನ್ ಉತ್ತಪ್ಪಗೆ ಕ್ಯಾಚಿತ್ತು ಔಟಾದರು. ಕೇವಲ 9 ರನ್‌ಗಳಿಗೆ ಎರಡು ವಿಕೆಟ್ ಬಿದ್ದ ನಂತರ ಬದ್ರೀನಾಥ್ ಮತ್ತು ಸುಶೀಲ್ ಕುಮಾರ್ ಉತ್ತಮ ಜೊತೆಯಾಟವಾಡಿದರು. ಬದ್ರಿನಾಥ್(ಅಜೇಯ 81) ಮತ್ತು ಸುಶೀಲ್(73) ಅವರ 144 ರನ್ ಜೊತೆಯಾಟದಿಂದ ತಮಿಳುನಾಡು ಇನ್ನೂ 11.1 ಓವರುಗಳು ಬಾಕಿಯಿರುವಂತೆಯೇ ವಿಜಯ ಸಾಧಿಸಿದರು.ಕರ್ನಾಟಕ 40.3 ಓವರುಗಳಲ್ಲಿ 168 ರನ್‌, ತಮಿಳುನಾಡು 38. 5 ಓವರುಗಳಲ್ಲಿ 169 ರನ್.

ವೆಬ್ದುನಿಯಾವನ್ನು ಓದಿ