ಸೂಪರ್ಬ್ ಲಕ್ಷ್ಮಣ್‌ಗೆ ಆಸೀಸ್ ಮಾಧ್ಯಮದಿಂದ ಗುಣಗಾನ

ಬುಧವಾರ, 6 ಅಕ್ಟೋಬರ್ 2010 (15:13 IST)
ಭಾರತದ ಒಂದು ವಿಕೆಟ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿವಿಎಸ್ ಲಕ್ಷ್ಮಣ್‌ರನ್ನು ಬಹುತೇಕ ಎಲ್ಲಾ ಆಸೀಸ್ ಮಾಧ್ಯಮಗಳು ಗುಣಗಾನ ಮಾಡಿಕೊಂಡಿದೆ. 'ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್' ಆಸೀಸ್‌ಗೆ ಮತ್ತೊಮ್ಮೆ ಕಂಟಕವಾಗಿ ಪರಿಣಸಿದರು ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಉದ್ವೇಗವು ಅತ್ಯುನ್ನತ ಮಟ್ಟದಲ್ಲಿತ್ತು. ಪ್ರತಿ ಬಾಲ್ ಎಸೆದಾಗ ಅಥವಾ ಸಿಂಗಲ್ ಪಡೆದಾಗ ಹೊಟ್ಟೆಯಲ್ಲಿ ಆನೆ ಕುಣಿದಾಡುವಂತಾಗಿತ್ತು. ಆದರೆ ಅಂತಿಮವಾಗಿ ವಿಜಯದ ರನ್ ಗಳಿಸಿದಾಗ ಕೂಲ್ ಬ್ಯಾಟ್ಸ್‌ಮನ್ ಮುಖದಲ್ಲಿ ಮಂದಹಾಸ ಮೂಡಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

ಒಬ್ಬ ಬ್ಯಾಟ್ಸ್‌ಮನ್‌ ತಪ್ಪು ತೀರ್ಪಿಗೆ ಬಲಿಯಾದ; ಮತ್ತೊಬ್ಬ ಇದರಿಂದ ಅದ್ಭುತವಾಗಿ ಪಾರಾದ. ಆದರೆ ಜಿದ್ದಾಜಿದ್ದಿನ ಪಂದ್ಯದಲ್ಲಿ ಅಂತಿಮ ಹಂತದ ವರೆಗೂ ಹೋರಾಟಿದ ಲಕ್ಷ್ಮಣ್ ಅಜೇಯ 73 ರನ್ ಗಳಿಸುವ ಮೂಲಕ ಹೀರೊ ಆಗಿ ಮೆರೆದರು ಎಂದು ಪತ್ರಿಕೆ ತಿಳಿಸಿದೆ.

ಅಂತಿಮ ದಿನದಾಟದಲ್ಲಿ ಲಕ್ಷ್ಮಣ್ ಪ್ರಾಮುಖ್ಯವೆನಿಸಿದ್ದರು. ಕಲಾತ್ಮಕ ಬ್ಯಾಟ್ಸ್‌ಮನ್ ಕ್ರೀಸಿನಲ್ಲಿರುವಷ್ಟು ಹೊತ್ತು ಆಸೀಸಗರಿಗೆ ಆತಂಕ ತಪ್ಪಿದ್ದಲ್ಲ; ಹಾಗೆಯೇ ತನ್ನ ಫೆವರೀಟ್ ತಂಡದ ವಿರುದ್ಧ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಲಕ್ಷ್ಮಣ್ ಗೆಲುವಿನ ರೂವಾರಿಯೆನಿಸಿದರು.

ಅದೇ ಹೊತ್ತಿಗೆ ಲಕ್ಷ್ಮಣ್‌ಗೆ ತನ್ನ ನೈಜ ಆಟವಾಡಲು ಹೆಚ್ಚಿನ ಅವಕಾಶವೊದಗಿಸಿದ ಆಸೀಸ್ ನಾಯಕ ರಿಕಿ ಪಾಂಟಿಂಗ್ ತಂತ್ರಗಾರಿಕೆಯನ್ನೂ ಮತ್ತೊಂದು ಪತ್ರಿಕೆ ಟೀಕಿಸಿದೆ.

ಈ ಫಲಿತಾಂಶ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಪ್ರತಿಷ್ಠಿತ ಆಶಸ್ ಸರಣಿಗಾಗಿನ ಆಸೀಸ್ ಪೂರ್ವಸಿದ್ಧತೆಗೂ ಧಕ್ಕೆಯನ್ನುಂಟು ಮಾಡಲಿದೆ ಎಂದು ಕೊರಿಯರ್ ಮೈಲ್ ಅಭಿಪ್ರಾಯಪಟ್ಟಿದೆ. ಆದರೂ ಭಾರತ ಉಪಖಂಡದ ವಿಕೆಟುಗಳಲ್ಲಿ ಆಡುವುದೆಂದರೆ ಯಾವುದೇ ತಂಡಕ್ಕಾದರೂ ಕಷ್ಟದ ವಿಚಾರ ಎಂದು ಉಲ್ಲೇಖಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ