ಸ್ಪಾಟ್‌ಫಿಕ್ಸಿಂಗ್‌ ಪ್ರತಿಕ್ರಿಯೆ ನೀಡಲು ಧೋನಿ ನಕಾರ

ಬುಧವಾರ, 29 ಮೇ 2013 (14:35 IST)
PTI
ಮಂಗಳವಾರ ಮುಂಬಯಿಯಲ್ಲಿ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿದ ಟೀಮ್‌ ಇಂಡಿಯಾ ನಾಯಕ ಮುಂದಿನ ತಿಂಗಳು ಇಂಗ್ಲಂಡ್‌ನ‌ಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಗೆ ಭಾರತ ತಯಾರಾಗಿದೆ ಎಂದು ಹೇಳಿದರು. ಆದರೆ ಐಪಿಎಲ್‌ನಲ್ಲಿ ನಡೆದ ಸ್ಪಾಟ್‌ ಫಿಕ್ಸಿಂಗ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ನಿಮ್ಮ ಮತ್ತು ವಿಂದೂ ದಾರಾ ಸಿಂಗ್‌ ನಡುವಿನ ಸಂಬಂಧದ ಕುರಿತು ವಿವರಿಸುತ್ತೀರಾ ಎಂಬ ಮಾಧ್ಯಮದವರ ತಮಾಷೆಯ ಪ್ರಶ್ನೆಗೆ ನಕ್ಕು ಸುಮ್ಮನಾದರು.

'ಚಾಂಪಿಯನ್ಸ್‌ ಟ್ರೋಫಿಗೆ ನಮ್ಮ ತಂಡದ ಆಟಗಾರರೆಲ್ಲ ಫಿಟ್‌ ಆಗಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ನೂತನ ಐಸಿಸಿ ಏಕದಿನ ನಿಯಮದಂತೆ ನಾವು ಭಾರತೀಯ ಉಪಖಂಡದಾಚೆ ಆಡುವ ಮೊದಲ ಕ್ರಿಕೆಟ್‌ ಸರಣಿ ಇದಾಗಿದೆ. ನಾವು ಎರಡು ಅಭ್ಯಾಸ ಪಂದ್ಯಗಳ ಮೂಲಕ ಸಿದ್ಧತೆ ನಡೆಸುತ್ತೇವೆ' ಎಂದು ಧೋನಿ ಹೇಳಿದರು.

ಭಾರತದ ಅಭ್ಯಾಸ ಪಂದ್ಯಗಳು ಶ್ರೀಲಂಕಾ (ಜೂ. 1, ಎಜ್‌ಬಾಸ್ಟನ್‌) ಮತ್ತು ಆಸ್ಟ್ರೇಲಿಯ (ಜೂ. 4, ಕಾರ್ಡಿಫ್) ವಿರುದ್ಧ ನಡೆಯಲಿವೆ. ಪಂದ್ಯಾವಳಿ ಜೂ. 6ರಿಂದ 23ರ ತನಕ ಸಾಗಲಿದೆ.

'ಆಟಗಾರರ ವೈಯಕ್ತಿಕ ನಿರ್ವಹಣೆ ಹಾಗೂ ಇಂಗ್ಲಂಡಿನ ವಾತಾವರಣದ ಮೇಲೆ ನಮ್ಮ ಸಾಮರ್ಥ್ಯ ಅವಲಂಬಿಸಿದೆ. ಪ್ರಶಸ್ತಿ ಎತ್ತಲು ನಮಗೊಂದು ಉತ್ತಮ ಅವಕಾಶ. ಈವರೆಗೆ ನಾವು ಚಾಂಪಿಯನ್ಸ್‌ ಲೀಗ್‌ನಲ್ಲಿ ಒಬ್ಬರೇ ಚಾಂಪಿಯನ್‌ ಎನಿಸಿಕೊಂಡಿಲ್ಲ...' ಎಂಬುದಾಗಿ ಧೋನಿ ಹೇಳಿದರು. 2002ರ ಪಂದ್ಯಾವಳಿಯಲ್ಲಿ ಶ್ರೀಲಂಕಾ ಜತೆ ಜಂಟಿ ಚಾಂಪಿಯನ್‌ ಆದದ್ದು ಭಾರತದ ಈವರೆಗಿನ ಅತ್ಯುತ್ತಮ ಸಾಧನೆ. 2000ದ ಕೂಟದ ಫೈನಲ್‌ನಲ್ಲಿ ನ್ಯೂಜಿಲಂಡಿಗೆ ಶರಣಾಗಿತ್ತು. ಆಗ ಇದನ್ನು ಐಸಿಸಿ ನಾಕೌಟ್‌ ಟ್ರೋಫಿ ಎಂದು ಕರೆಯಲಾಗುತ್ತಿತ್ತು.

ವೆಬ್ದುನಿಯಾವನ್ನು ಓದಿ