ಸ್ಪಾಟ್‌ಫಿಕ್ಸಿಂಗ್ ಆರೋಪದಿಂದ ಮುಕ್ತ: ಶ್ರೀಶಾಂತ್ ವಿಶ್ವಾಸ

ಗುರುವಾರ, 13 ಜೂನ್ 2013 (14:41 IST)
PTI
ನ್ಯಾಯಾಂಗದ ಮೇಲೆ ತನಗೆ ನಂಬಿಕೆ ಇದ್ದು, ಆರೋಪದಿಂದ ಮುಕ್ತನಾಗುವೆ ಎಂದು ಪುನರುಚ್ಚರಿಸಿರುವ ಕೇರಳದ ವೇಗಿ ಎಸ್‌. ಶ್ರೀಶಾಂತ್‌ ಭಾರತ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಶ್ರೀಶಾಂತ್‌ 27 ದಿನಗಳ ಕಾಲ ತಿಹಾರ್‌ ಜೈಲಿನಲ್ಲಿ ಕಳೆದ ಅನಂತರ ಜಾಮೀನಿನ ಮೇಲೆ ಮಂಗಳವಾರ ಬಿಡುಗಡೆಯಾಗಿದ್ದರು.

ಬುಧವಾರ ತವರು ಕೊಚ್ಚಿ ಸಮೀಪದ ತ್ರಿಪುಣಿತ್ತುರಕ್ಕೆ ಆಗಮಿಸಿದ ಶ್ರೀಶಾಂತ್‌, ಹೆತ್ತವರು ಹಾಗೂ ಸಂಬಂಧಿಕರನ್ನು ಭೇಟಿ ಮಾಡಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

'ನಿಜವಾಗಿಯೂ ಕ್ರಿಕೆಟ್‌ ಆಡುವುದು ನನ್ನ ಕನಸು. ರಾಷ್ಟ್ರೀಯ ತಂಡಕ್ಕೆ ಮರಳುವುದು ನನ್ನ ಮೊದಲ ಆದ್ಯತೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡುವುದು ನನ್ನ ಕನಸಾಗಿತ್ತು. ಆದರೆ ಸದ್ಯದ ಈ ಪರಿಸ್ಥಿತಿಯಲ್ಲಿ ಖಚಿತವಾಗಿ ಹೇಳಲಾರೆ...' ಎಂದು ಶ್ರೀಶಾಂತ್‌ ಹೇಳಿದರು.

ಶೀಘ್ರದಲ್ಲೇ ಅಭ್ಯಾಸ ಆರಂಭಿಸುವುದಾಗಿ ತಿಳಿಸಿದ ಶ್ರೀಶಾಂತ್‌, 'ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಪರಾದರ್ಶಕತೆಯ ಒಂದು ಭಾಗವಾಗಿ ನನ್ನನ್ನು ಬಂಧಿಸಲಾಗಿತ್ತು. ಶೀಘ್ರದಲ್ಲೇ ಎಲ್ಲವೂ ಬೆಳಕಿಗೆ ಬರಲಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ...' ಎಂದು ಶ್ರೀ ವಿಶ್ವಾಸ ವ್ಯಕ್ತಪಡಿಸಿದರು.

ತಿಹಾರ್‌ ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ವಿವರ ನೀಡಲು ನಿರಾಕರಿಸಿದ ಶ್ರೀಶಾಂತ್‌, 'ಒಟ್ಟಾರೆಯಾಗಿ ನಾನು ಹೇಳುವುದಿಷ್ಟೇ... ನಾನು ಕ್ರೀಡೆಯನ್ನು ಪ್ರೀತಿಸುತ್ತೇನೆ. ಕ್ರಿಕೆಟಿಗೆ ಕಾಲಿಟ್ಟ ಮೊದಲ ದಿನದಿಂದಲೂ ನಾನು ಶ್ರೇಷ್ಠ ಪ್ರದರ್ಶನಕ್ಕೆ ಪ್ರಯತ್ನಿಸುತ್ತ ಬಂದಿದ್ದೇನೆ. ನನ್ನನ್ನು ನಂಬಿ. ಎಲ್ಲವೂ ಬಗೆಹರಿಯಲಿದ್ದು, ಅದಕ್ಕಾಗಿ ಕಾಯುತ್ತಿದ್ದೇನೆ. ಪ್ರತಿಯೊಂದನ್ನು ವಿವರಿಸಲಿದ್ದೇನೆ' ಎಂದರು.

'ಕ್ರಿಕೆಟ್‌ ಸಮುದಾಯದ ಪ್ರತಿಯೊಬ್ಬರೂ ನನ್ನ ಬೆಂಬಲಕ್ಕಿದ್ದಾರೆ. ಪ್ರತಿಯೊಬ್ಬರೂ ಮೊಬೈಲ್‌ ಸಂದೇಶ ಕಳುಹಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌, ಬಿಸಿಸಿಐ, ಸ್ನೇಹಿತರು, ಮಾಧ್ಯಮ... ಎಲ್ಲರಿಗೂ ಧನ್ಯವಾದಗಳು. ಯಾರ ವಿರುದ್ಧವೂ ನಾನು ಆರೋಪ ಹೊರಿಸಲಾರೆ' ಎಂದು ಶ್ರೀಶಾಂತ್‌ ಹೇಳಿದರು.

ವೆಬ್ದುನಿಯಾವನ್ನು ಓದಿ