ಸ್ಪಾಟ್‌ಫಿಕ್ಸಿಂಗ್: ಆರೋಪಿಗಳ ಪಾಸ್‌ಪೋರ್ಟ್ ವಶಕ್ಕೆ

ಮಂಗಳವಾರ, 11 ಜೂನ್ 2013 (12:38 IST)
PTI
ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಬೌಲರ್‌ಗಳಾದ ಎಸ್‌. ಶ್ರೀಶಾಂತ್‌ ಮತ್ತು ಅಂಕಿತ್‌ ಚವಾಣ್‌ ಸೇರಿದಂತೆ 18 ಮಂದಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.

ಮೊಕಾ ಕಾಯ್ದೆ ಅನ್ವಯ ಆಟಗಾರರ ವಿರುದ್ಧ ಪ್ರಕರಣ ದಾಖಸಿಕೊಳ್ಳುವ ದಿಲ್ಲಿ ಪೊಲೀಸರ ಮನವಿಯನ್ನು ತಿರಸ್ಕರಿಸಿದ ದಕ್ಷಿಣ ದಿಲ್ಲಿಯ ಸಾಕೇತ್‌ ನ್ಯಾಯಾಲಯ, ಶ್ರೀಶಾಂತ್‌ ಮತ್ತು ಅಂಕಿತ್‌ ಅಲ್ಲದೇ 16 ಬುಕ್ಕಿಗಳಿಗೆ ಜಾಮೀನು ಮಂಜೂರು ಮಾಡಿತು. ನ್ಯಾಯಾಂಗ ಬಂಧನದಲ್ಲಿರುವ ಮತ್ತೂಬ್ಬ ಆಟಗಾರ ಅಜಿತ್‌ ಚಾಂಡಿಲ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ.

ಆರೋಪಿಗಳು ಪಾಸ್‌ಪೋರ್ಟ್‌ ಒಪ್ಪಿಸಲು ಸೂಚಿಸಿರುವ ನ್ಯಾಯಾಲಯ, ವಿದೇಶಕ್ಕೆ ತೆರಳದಂತೆ ಸೂಚಿಸಿದೆ. ಆದರೆ ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಜಾಮೀನು ದೊರೆತವರಲ್ಲಿ ಬುಕ್ಕಿ ಮತ್ತು ಶ್ರೀಶಾಂತ್‌ ಗೆಳೆಯ ಜಿಜು ಜನಾರ್ದನ್‌ ಕೂಡ ಸೇರಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಆಟಗಾರರನ್ನು ಇತ್ತೀಚೆಗೆ ತಿಹಾರ್‌ ಜೈಲಿಗೆ ವರ್ಗಾಯಿಸಲಾಗಿತ್ತು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಶ್ರೀಶಾಂತ್‌ ಮತ್ತು ಅಂಕಿತ್‌ ಮಂಗಳವಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

ವೆಬ್ದುನಿಯಾವನ್ನು ಓದಿ