ಸ್ಪಾಟ್‌ಫಿಕ್ಸಿಂಗ್: ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಸೋಮವಾರ, 20 ಮೇ 2013 (14:15 IST)
PTI
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಕಳಂಕಿತ ಆಟಗಾರರಾದ ಶ್ರೀಶಾಂತ್, ಅಜಿತ್ ಚಾಂಡೀಲ ಹಾಗೂ ಅಂಕಿತ್ ಚವಾಣ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮಾಲೀಕರು ಎಫ್‌ಐಆರ್ ದಾಖಲಿಸಿದೆ ಎಂದು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ.

ಫಿಕ್ಸಿಂಗ್ ಹಗರಣದ ಕುರಿತಾಗಿ ನಡೆದ ಬಿಸಿಸಿಐ ಉನ್ನತಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸನ್ ಈ ವಿಷಯ ತಿಳಿಸಿದರು. ಅಲ್ಲದೇ, ಈ ಬಾರಿಯ ಐಪಿಎಲ್‌ನಲ್ಲಿ ಭುಗಿಲೆದ್ದಿರುವ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಬಿಸಿಸಿಐ ಆಂತರಿಕ ತನಿಖೆ ನಡೆಸಲಿದ್ದು, ಆ ತನಿಖಾ ವರದಿ ಕೈ ಸೇರಿದ ಮೇಲಷ್ಟೇ ಈಗ ಬಂಧಿತರಾಗಿರುವ ರಾಜಸ್ಥಾನ ರಾಯಲ್ಸ್ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶ್ರೀನಿವಾಸನ್ ತಿಳಿಸಿದ್ದಾರೆ.

ರವಿ ನೇತೃತ್ವದಲ್ಲಿ ತನಿಖೆ: ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಖ್ಯಸ್ಥ ರವಿ ಸಾವನಿ ಅವರ ನೇತೃತ್ವದಲ್ಲಿ, ಈ ಬಾರಿಯ ಐಪಿಎಲ್‌ನ ಸ್ಪಾಟ್ ಫಿಕ್ಸಿಂಗ್ ತನಿಖೆ ನಡೆಸಲಾಗುವುದು ಎಂದು ತಿಳಿಸಿದ ಶ್ರೀನಿವಾಸನ್, ಆದಷ್ಟೂ ಬೇಗನೇ ತನಿಖಾ ವರದಿ ತಮ್ಮ ಕೈಸೇರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸ್ಪಾಟ್ ಫಿಕ್ಸಿಂಗ್ ತನಿಖೆ ನಡೆಸಲು ರಚಿಸಲಾಗಿರುವ ತನಿಖಾ ತಂಡಕ್ಕೆ ರವಿ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ದಳಗಳು: ಕ್ರಿಕೆಟ್‌ನಲ್ಲಿ ಹಾಸುಹೊಕ್ಕಿರುವ ಭ್ರಷ್ಟಾಚಾರವನ್ನು ಹೊಡೆದಟ್ಟಲು, ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ತಂಡದಲ್ಲೂ ಒಂದೊಂದು ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸುವುದಾಗಿ ಅವರು ತಿಳಿಸಿದರು. ಬುಕಿಗಳನ್ನಾಗಲೀ, ಭ್ರಷ್ಟಾಚಾರವನ್ನಾಗಲೀ ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟ. ಬುಕಿಗಳ ವಿಚಾರದಲ್ಲಿ ಬಿಸಿಸಿಐ ಅಸಹಾಯಕ. ಆದರೆ, ಆಟಗಾರರನ್ನು ನಿಯಂತ್ರಿಸುವ ಮೂಲಕ ನಾವು ಫಿಕ್ಸಿಂಗ್‌ನಂಥ ಪಿಡುಗನ್ನು ನಿವಾರಿಸಲು ಯತ್ನಿಸುತ್ತೇವೆ ಎಂದು ಶ್ರೀನಿವಾಸನ್ ತಿಳಿಸಿದರು.

ಏಜೆಂಟರ್‌ಗಳಿಗೆ ಗುರುತಿನ ಚೀಟಿ: ಆಟಗಾರರ ಏಜೆಂಟ್‌ಗಳಿಗೆ ಇನ್ನು, ಗುರುತಿನ ಚೀಟಿ ನೀಡಲು ಸಭೆಯಲ್ಲಿ ನಿರ್ಧರಿಸಿರುವುದಾಗಿ ಶ್ರೀನಿವಾಸನ್ ತಿಳಿಸಿದರು. ಬಿಸಿಸಿಐ ಕಾರ್ಯಕಾರಿ ಮಂಡಳಿ ಈ ಶೀಘ್ರವೇ ಅದನ್ನು ಜಾರಿಗೊಳಿಸಲಿದೆ. ಪಂದ್ಯಾವಳಿ ಸಮಯದಲ್ಲಿ ಆಟಗಾರರನ್ನು ಭೇಟಿ ಮಾಡುವವರ ಮೇಲೂ ಹದ್ದಿನ ಕಣ್ಣಿಡಲಾಗುವುದು ಎಂದು ಅವರು ವಿವರಿಸಿದರು.


ಕಠಿಣ ಕಾನೂನು: ಸಿಬಲ್

ನವದೆಹಲಿ: ಕ್ರಿಕೆಟ್ ಅಲ್ಲದೇ ಇತರ ಕ್ರೀಡೆಗಳಲ್ಲೂ ನಡೆಯಬಹುದಾದ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಕಠಿಣ ಕಾನೂನನ್ನು ರೂಪಿಸುವಲ್ಲಿ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಒಲವು ತೋರಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ, ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರನ್ನೇ ಭೇಟಿಯಾದ ನಂತರ ಕಪಿಲ್ ಈ ವಿಷಯ ತಿಳಿಸಿದರು.


ಅಂದು ಕ್ರಿಕೆಟಿಗ ಇಂದು ಬುಕ್ಕಿ!

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು, ಭಾನುವಾರ ಮತ್ತೆ ಮೂವರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬನ ಹೆಸರು ಮನೀಷ್ ಬುಡೇವಾ ಆಗಿದ್ದು, ಈತ ಮಾಜಿ ರಣಜಿ ಆಟಗಾರ ಎಂದು ಪೊಲೀಸರು ತಿಳಿಸಿದ್ದಾರೆ. ಫಿಕ್ಸಿಂಗ್‌ನಲ್ಲಿ ಆರೋಪ ಎದುರಿಸುತ್ತಿರುವ ಅಜಿತ್ ಚಾಂಡೀಲ ಅವರೊಂದಿಗೆ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದ ಮನೀಷ್‌ಗೆ ಹಲವಾರು ಬುಕ್ಕಿಗಳ ಪರಿಚಯವಿತ್ತು. ಇವರ ಸಹವಾಸಕ್ಕೆ ಬಿದ್ದಿದ್ದ ಅಜಿತ್, ಸುಮಾರುನಾಲ್ಕು ಬುಕಿಗಳ ಗುಂಪುಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 2003ರಿಂದ 2005ರ ಅವಧಿಯಲ್ಲಿ ವಿದರ್ಭ ರಣಜಿ ತಂಡದ ಪರವಾಗಿ ಆಡಿದ್ದ ಮನೀಷ್ ಬಂಧನದಿಂದ ಪ್ರಕರಣ ಮತ್ತಷ್ಟು ಕುತೂಹಲ ಪಡೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ