ಸ್ಪಾಟ್‌ಫಿಕ್ಸಿಂಗ್: ಬುಕ್ಕಿ ಜಿತೇಂದ್ರ ಸಿಂಗ್ ಪೊಲೀಸ್ ವಶಕ್ಕೆ

ಶನಿವಾರ, 29 ಜೂನ್ 2013 (14:02 IST)
PTI
ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ಪ್ರಮುಖ ರೂವಾರಿ ಎಂದು ಗುರುತಿಸಲಾದ ಬುಕ್ಕಿ ಜಿತೇಂದ್ರ ಸಿಂಗ್‌ ಅಲಿಯಾಸ್‌ ಜೀತು ಎಂಬಾತನನ್ನು ದಿಲ್ಲಿ ಪೊಲೀಸರು ಶುಕ್ರವಾರ ಅಹಮದಾಬಾದ್‌ನಲ್ಲಿ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣ ಬೆಳಕಿಗೆ ಬಂದ 40 ದಿನಗಳ ಬಳಿಕ ಬುಕ್ಕಿಯೊಬ್ಬ ಸೆರೆ ಸಿಕ್ಕಂತಾಗಿದೆ.

ರಾಜಸ್ಥಾನ್‌ ರಾಯಲ್ಸ್‌ ತಂಡದ ಕ್ರಿಕೆಟಿಗರಾದ ಎಸ್‌. ಶ್ರೀಶಾಂತ್‌, ಅಜಿತ್‌ ಚಾಂಡಿಲ ಮತ್ತು ಅಂಕಿತ್‌ ಚವಾಣ್‌ ಸೇರಿದಂತೆ ಇತರ ಬುಕ್ಕಿಗಳು ಬಂಧನದ ವೇಳೆ ನೀಡಿದ್ದ ಮಾಹಿತಿಗಳನ್ನು ಆಧರಿಸಿ ಜಿತೇಂದ್ರ ಸಿಂಗ್‌ನನ್ನು ಬಂಧಿಸಲಾಗಿದೆ.

ಪ್ರತಿಯೊಂದು ಪಂದ್ಯವನ್ನೂ ಫಿಕ್ಸ್‌ ಮಾಡುತ್ತಿದ್ದ ಚಂದ್ರೇಶ್‌ ಪಟೇಲ್‌ ಅಲಿಯಾಸ್‌ ಚಾಂದ್‌ ಜತೆ ಬುಕ್ಕಿ ಜಿತೇಂದ್ರ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿಯನ್ನು ದಿಲ್ಲಿ ಪೊಲೀಸರು ನೀಡಿದ್ದಾರೆ.

ಬುಕ್ಕಿ ಜಿತೇಂದ್ರ ಆಟಗಾರರ ಸಂಚಾರ ವ್ಯವಸ್ಥೆ ಮಾಡುತ್ತಿದ್ದು, ಬುಕ್ಕಿಗಳು ಈತನ ಮೂಲಕ ಮೂವರು ಕ್ರಿಕೆಟಿಗರ ಸಂಪರ್ಕ ಸಾಧಿಸಿದ್ದರು. ಈತನ ಬಂಧನದಿಂದ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಲಭ್ಯವಾಗುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ