ಸ್ಪಾಟ್‌ಫಿಕ್ಸಿಂಗ್ ಯಾವುದೇ ತನಿಖೆಗೆ ಸಿದ್ಧ: ರವೂಫ್

ಗುರುವಾರ, 30 ಮೇ 2013 (15:00 IST)
PTI
ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಬಲೆಗೆ ಸಿಲುಕಿರುವ ಪಾಕಿಸ್ಥಾನಿ ಅಂಪಾಯರ್‌ ಅಸದ್‌ ರವೂಫ್ ಮೊದಲ ಸಲ ಮೌನ ಮುರಿದಿದ್ದಾರೆ. ತಾನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಹಾಗೂ ಈ ಆರೋಪದಿಂದ 'ಅಸದ್‌ ರವೂಫ್' ಎಂಬ ಹೆಸರನ್ನು ಅಳಿಸುವುದೇ ತನ್ನ ಉದ್ದೇಶ ಎಂದಿದ್ದಾರೆ.

'ಹಣ, ಉಡುಗೊರೆ, ಸ್ಪಾಟ್‌ ಫಿಕ್ಸಿಂಗ್‌, ಮ್ಯಾಚ್‌ ಫಿಕ್ಸಿಂಗ್‌... ಇವ್ಯಾವುವೂ ನನ್ನ ಗುರಿಗಳಲ್ಲ. ಇವೆಲ್ಲ ನನ್ನ ಬದುಕಿನ ವಿಷಯಗಳೇ ಅಲ್ಲ...' ಎಂದು ರವೂಫ್ ಹೇಳಿದರು.

ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಪಾಕಿಸ್ಥಾನಿ ಅಂಪಾಯರ್‌ಗಳ ಪಾತ್ರವೂ ಇದೆ ಎಂದು ಕೇಳಿಬಂದಾಗ ಅಸದ್‌ ರವೂಫ್ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿತ್ತು. ಆರನೇ ಐಪಿಎಲ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಇಬ್ಬರು ಪಾಕ್‌ ಅಂಪಾಯರ್‌ಗಳಲ್ಲಿ ಅಸದ್‌ ರವೂಫ್ ಒಬ್ಬರು.

'ಸ್ಪಾಟ್‌ ಫಿಕ್ಸಿಂಗ್‌ ತನಿಖೆ ಯಾವ ಹಂತಕ್ಕೆ ಬಂದಿದೆಯೋ ನನಗೆ ತಿಳಿದಿಲ್ಲ. ಆದರೆ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಸೆಕ್ಯುರಿಟಿ ಯುನಿಟ್‌ ನನ್ನನ್ನು ತನಿಖೆ ನಡೆಸುವುದಾದರೆ ಬಹಳ ಸಂತೋಷ. ನಾನು ಇದನ್ನು ಎದುರಿಸಲು ಸಿದ್ಧ ಹಾಗೂ ಅವರೆಲ್ಲ ಪ್ರಶ್ನೆಗಳಿಗೂ ಉತ್ತರಿಸಲು ತಯಾರಿದ್ದೇನೆ' ಎಂದು ರವೂಫ್ ಮಾಧ್ಯಮಗಳಿಗೆ ತಿಳಿಸಿದರು. ತನ್ನ ಮೇಲಿನ ಎಲ್ಲ ಆರೋಪಗಳೂ ನಿರಾಧಾರ ಎಂದೂ ಹೇಳಿದರು.

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಅಸದ್‌ ರವೂಫ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆಯೇ ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಿಂದ ಈ ಪಾಕ್‌ ಅಂಪಾಯರ್‌ನನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು.

ಈ ಬೆಳವಣಿಗೆಯ ಬಳಿಕ ತನ್ನ ದೇಶದ ಅಂಪಾಯರ್‌ ಬೆಂಬಲಕ್ಕೆ ನಿಂತಿದ್ದ ಪಿಸಿಬಿ, ಇದೀಗ ತಮ್ಮಿಬ್ಬರ ನಡುವಿನ ಅಂತರ ಕಾಯ್ದುಕೊಳ್ಳುವತ್ತ ಮುಂದಾಗಿದೆ. ಐಪಿಎಲ್‌ ಪಂದ್ಯಾವಳಿ ನಡೆದದ್ದು ಭಾರತದಲ್ಲಿ, ರವೂಫ್ ಐಸಿಸಿ ಅಂಪಾಯರ್‌; ತಾನೇಕೆ ಮಧ್ಯ ಪ್ರವೇಶಿಸಲಿ ಎಂಬ ರೀತಿಯಲ್ಲಿ ಪಿಸಿಬಿ ಹೇಳಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ