ಸ್ಪಾಟ್ ಫಿಕ್ಸಿಂಗ್; ತಪ್ಪೊಪ್ಪಿಕೊಂಡ ಅಮೇರ್: ವರದಿ

ಶನಿವಾರ, 17 ಸೆಪ್ಟಂಬರ್ 2011 (16:49 IST)
ಮೋಸದಾಟ ಪ್ರಕರಣದಲ್ಲಿ ಸದಾ ನಿರಪರಾಧಿ ಎಂದೇ ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೇರ್ ಕೊನೆಗೂ ಮೌನ ಮುರಿದುಕೊಂಡಿದ್ದು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


ಕಳೆದ ವರ್ಷ ಇಡೀ ಜಗತ್ತನೇ ಬೆಚ್ಚಿ ಬೀಳಿಸಿದ್ದ ಸ್ಪಾಟ್ ಫಿಕ್ಸಿಂಗ್ ಘಟನೆ ಸಂಬಂಧ ಪಾಕಿಸ್ತಾನದ ಮೂವರು ಪ್ರಮುಖ ಆಟಗಾರರು ಸಿಕ್ಕಿ ಬಿದ್ದಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಮಿತಿಯು ಪಾಕಿಸ್ತಾನದ ಮಾಜಿ ಟೆಸ್ಟ್ ನಾಯಕ ಸಲ್ಮಾನ್ ಭಟ್ ಹಾಗೂ ವೇಗಿಗಳಾದ ಮೊಹಮ್ಮದ್ ಅಮೇರ್ ಮತ್ತು ಮೊಹಮ್ಮದ್ ಆಸಿಫ್‌ ಅವರನ್ನು ಶಿಕ್ಷೆಗೆ ಗುರಿಪಡಿಸಿತ್ತು.

ಆದರೆ ತಾನೇನೂ ತಪ್ಪು ಮಾಡಿಲ್ಲ ಎಂದು ತಗಾದೆ ಎತ್ತಿದ್ದ ಅಮೇರ್ ಕೊನೆಗೂ ಇದೀಗ ತಪ್ಪೊಪ್ಪಿಕೊಂಡಿದ್ದು, ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಲಂಡನ್‌ನ ಸೌಥ್‌ವಾರ್ಕ್ ಕ್ರೌನ್ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ ಎಂದು ದಿ ನ್ಯೂಸ್ ಇಂಟೆರ್‌ನ್ಯಾಷನಲ್ ತಿಳಿಸಿವೆ.

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ನಾಯಕ ಭಟ್ ಸೂಚನೆಯಂತೆ ಅಮೇರ್ ಹಾಗೂ ಆಸಿಫ್ ಉದ್ದೇಶಪೂರ್ವಕವಾಗಿಯೇ ನೊ ಬಾಲ್‌ಗಳನ್ನು ಎಸೆದಿದ್ದರು. ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬುಕ್ಕಿ ಮಜರ್ ಮಜೀದ್‌ರನ್ನು ಬಂಧಿಸಿ ವಿಚಾರಣೆಗೊಳಿಪಡಿಸಲಾದಾಗ ಸಂತ್ಯಾಂಶ ಹೊರಬಂದಿತ್ತು.

ಅಮೇರ್ ನೀಡಿರುವ ಹೇಳಿಕೆಯಂತೆ, ಲಾರ್ಡ್ಸ್ ಟೆಸ್ಟ್‌ನಲ್ಲಿ ನೊ ಬಾಲ್ ಹಾಕುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಪತ್ರಿಕೆ ವರದಿ ಮಾಡಿವೆ. ಆದರೆ ಸಲ್ಮಾನ್ ಭಟ್ ಅವರನ್ನು ನೇರವಾಗಿ ಹೊಣೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಬಂದಿಲ್ಲ.

ಮೋಸದಾಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಟ್ ಹಾಗೂ ಆಸಿಫ್ ಮೇಲೆ ತಲಾ ಹತ್ತು ವರ್ಷಗಳ ನಿಷೇಧ ಹೇರಿದ್ದರೆ ಅಮೇರ್ ಅವರನ್ನು ಐದು ವರ್ಷಗಳಿಗೆ ಬ್ಯಾನ್ ಮಾಡಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 4ರಂದು ನಡೆಯಲಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ