ಸ್ಪಾಟ್ ಫಿಕ್ಸಿಂಗ್ ಬೆಟ್ಟಿಂಗ್ ಪ್ರಕರಣ: ಬಿಸಿಸಿಐ ತನಿಖೆಗೆ ಶುರು

ಭಾನುವಾರ, 23 ಜೂನ್ 2013 (11:09 IST)
PR
PR
ಐಪಿಎಲ್ ನಲ್ಲಿ ನಡೆದಿದೆ ಎನ್ನಲಾದ `ಸ್ಪಾಟ್ ಫಿಕ್ಸಿಂಗ್' ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಿಸಿರುವ ಇಬ್ಬರು ಸದಸ್ಯರ ಆಯೋಗ ಅಧಿಕೃತವಾಗಿ ತನ್ನ ಕೆಲಸಕ್ಕೆ ಚಾಲನೆ ನೀಡಿದೆ.

ಬಿಸಿಸಿಐ ಜನರಲ್ ಮ್ಯಾನೇಜರ್ (ಕ್ರಿಕೆಟ್ ಅಭಿವೃದ್ಧಿ) ರತ್ನಾಕರ ಶೆಟ್ಟಿ ಶುಕ್ರವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಆಯೋಗದ ಸದಸ್ಯರಾದ ನ್ಯಾಯಮೂರ್ತಿ ಟಿ. ಜಯರಾಮ ಚೌಟ ಮತ್ತು ಆರ್. ಬಾಲಸುಬ್ರಮಣ್ಯನ್ ಅವರನ್ನು ಭೇಟಿಯಾದರು. ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ತನಿಖೆಗೆ ಬಿಸಿಸಿಐ ಆಯೋಗವನ್ನು ಹೋದ ತಿಂಗಳು ನೇಮಿಸಿತ್ತು. ಆದರೆ ಇಬ್ಬರು ನ್ಯಾಯಾಧೀಶರು ಇದೇ ಮೊದಲ ಬಾರಿಗೆ ಜೊತೆ ಸೇರಿ, ತನಿಖಾ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನೀಡುವಂತೆ ಆಯೋಗ ಬಿಸಿಸಿಐನಲ್ಲಿ ಕೇಳಿಕೊಂಡಿತ್ತು. ಅವುಗಳನ್ನು ಮಂಡಳಿಯು ಒದಗಿಸಿದೆ.

`ಆಯೋಗ ಬಯಸಿದ್ದಂತಹ ಎಲ್ಲ ದಾಖಲೆಗಳನ್ನು ಒದಗಿಸಿದ್ದೇವೆ. ತನಿಖಾ ಪ್ರಕ್ರಿಯೆ ಮುಂದುವರಿಸುವುದು ಆಯೋಗಕ್ಕೆ ಬಿಟ್ಟ ವಿಚಾರ. ಅವರು ಏನು ಮಾಡುವರು ಎಂಬುದನ್ನು ಕಾದು ನೋಡುವ' ಎಂದು ಆಯೋಗದ ಸದಸ್ಯರನ್ನು ಭೇಟಿಯಾದ ಬಳಿಕ ರತ್ನಾಕರ ಶೆಟ್ಟಿ ಪ್ರತಿಕ್ರಿಯಿಸಿದರು. ಬಿಸಿಸಿಐನ ಕಾನೂನು ತಂಡವು ಅಗತ್ಯದ ಕೆಲವು ದಾಖಲೆಗಳನ್ನು ಜೂನ್ 15 ರಂದೇ ಆಯೋಗಕ್ಕೆ ನೀಡಿತ್ತು. `ತನಿಖಾ ಆಯೋಗ ಅನುಸರಿಸಬೇಕಾದ ಪ್ರಕ್ರಿಯೆ ಹಾಗೂ ನಿಯಮಗಳನ್ನು ಈ ವೇಳೆ ಚರ್ಚಿಸಲಾಯಿತು' ಎಂದು ಅವರು ತಿಳಿಸಿದರು.

ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಗುರುನಾಥ್ ಮೇಯಪ್ಪನ್ (ಎನ್. ಶ್ರೀನಿವಾಸನ್ ಅಳಿಯ), ಸೂಪರ್ ಕಿಂಗ್ಸ್ ತಂಡದ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್, ರಾಜಸ್ತಾನ ರಾಯಲ್ಸ್ ತಂಡದ ಒಡೆತನ ಹೊಂದಿರುವ ಜೈಪುರ ಐಪಿಎಲ್ ಪ್ರೈವೇಟ್ ಲಿಮಿಟೆಡ್ ಹಾಗೂ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ಪಾತ್ರ ಏನು ಎಂಬುದರ ಬಗ್ಗೆ ಆಯೋಗ ಮೊದಲು ತನಿಖೆ ನಡೆಸಲಿದೆ.
ಅದೇ ರೀತಿ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಾದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಮೇಲಿನ ಆರೋಪಗಳ ಬಗ್ಗೆಯೂ ತನಿಖೆ ನಡೆಯಲಿದೆ.

ಚೌಟ ಅವರನ್ನು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ರತ್ನಾಕರ ಶೆಟ್ಟಿ ಇದೇ ವೇಳೆ ಹೇಳಿದರು. ಬಿಸಿಸಿಐ ಮೊದಲು ನೇಮಿಸಿದ್ದ ಆಯೋಗದಲ್ಲಿ ಚೌಟ ಮತ್ತು ಬಾಲಸುಬ್ರಮಣ್ಯನ್ ಅಲ್ಲದೆ ಸಂಜಯ್ ಜಗದಾಳೆ ಕೂಡಾ ಇದ್ದರು. ಆದರೆ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದಾಳೆ ಆಯೋಗದಿಂದಲೂ ಹೊರನಡೆದಿದ್ದರು. ಆ ಬಳಿಕ ಮಂಡಳಿ ಇಬ್ಬರು ಸದಸ್ಯರ ಆಯೋಗವನ್ನು ಮತ್ತೆ ನೇಮಿಸಿತ್ತು.

ವೆಬ್ದುನಿಯಾವನ್ನು ಓದಿ