ಹಸ್ಸಿ ಭರ್ಜರಿ ಪ್ರದರ್ಶನದಿಂದಾಗಿ ಚೆನ್ನೈ ತಂಡಕ್ಕೆ ಜಯ

ಸೋಮವಾರ, 29 ಏಪ್ರಿಲ್ 2013 (15:13 IST)
PTI
ಬ್ಯಾಟ್ಸ್‌ಮನ್‌ಗಳ ಅಬ್ಬರ ಅಭಿಮಾನಿಗಳನ್ನು ರಂಜಿಸುತ್ತಿದ್ದರೆ, ಬೌಲರ್‌ಗಳ ಪಾಡು ಮಾತ್ರ ಶೋಚನಿಯ. ಇದು ಇಲ್ಲಿನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಚಿತ್ರಣ.

ತವರಿನಲ್ಲಿ ಸಿಎಸ್‌ಕೆ ವಿರುದ್ಧ ಸೋಲನುಭವಿಸಿದ್ದ ಕೆಕೆಆರ್ ತಂಡ, ಸೇಡು ತೀರಿಸಿಕೊಳ್ಳುವ ಉದ್ದೇಶದೊಂದಿಗೆ ಸಿಎಸ್‌ಕೆ ವಿರುದ್ಧ ಕಾದಾಟಕ್ಕಿಳಿಯಿತು. ಆದರೆ ತವರಿನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ ಸಿಎಸ್‌ಕೆ ತಂಡ ಕೆಕೆಆರ್ ವಿರುದ್ಧ 14 ರನ್‌ಗಳ ಜಯ ಸಾಧಿಸಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್‌ಕೆ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 200 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ ಉತ್ತಮ ಹೋರಾಟ ನೀಡಿತಾದರೂ ಅಂತಿಮವಾಗಿ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್‌ಗಳಿಸಿ ಗೆಲವಿನ ದಡ ಸೇರುವಲ್ಲಿ ವಿಫಲವಾಯಿತು.

ಚೆನ್ನೈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಾಹ (39) ಹಾಗೂ ಮೈಕ್ ಹಸ್ಸಿ (98) ತಂಡಕ್ಕೆ 103 ರನ್‌ಗಳ ಉತ್ತಮ ಆರಂಭ ನೀಡಿತು. ನಂತರ ಬಂದ ರೈನಾ ಸ್ಫೋಟಕ 44 ರನ್‌ಗಳಿಸಿ ರನೌಟ್ ಆದರು. ನಂತರ ಉತ್ತಮ ಬ್ಯಾಟಿಂಗ್ ನಡೆಸಿದ ಧೋನಿ (18) ಹಾಗೂ ಜಡೇಜಾ (1) ರನ್‌ಗಳಿಸಿ ಅಜೇಯರಾಗುಳಿದರು.

ಉತ್ತಮ ಪ್ರತಿರೋಧ: ಚೆನ್ನೈ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ ಮೊದಲ ಓವರ್‌ನಲ್ಲೇ 18 ರನ್‌ಗಳಿಸಿ ಭರ್ಜರಿ ಆರಂಭವನ್ನೇ ಪಡೆಯಿತು. ಆದರೆ ಕೇಲ 14 ರನ್‌ಗಳಿಸಿದ್ದ ನಾಯಕ ಗಂಭೀರ್ ಮೊರಿಸ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಬಂದ ಮೆಕಲಂ 6, ಕಾಲಿಸ್ 19 ರನ್‌ಗಳಿಸಿ ಔಟಾದರು. ಈ ವೇಳೆ ಜತೆಯಾದ ಮನ್ವಿಂದರ್ ಬಿಸ್ಲಾ ಹಾಗೂ ಇಯಾನ್ ಮಾರ್ಗನ್ 79 ರನ್‌ಗಳ ಜತೆಯಾಟವಾಡಿದರು. ಬಿಸ್ಲಾ 61 ಎಸೆತಗಳಲ್ಲಿ 92 ರನ್‌ಗಳಿಸಿ ರನೌಟ್ ಆಗುವ ಮೂಲಕ ತಂಡದ ಹೋರಾಟ ಅಂತ್ಯವಾಯಿತು. ಅಂತಿಮವಾಗಿ ಮಾರ್ಗನ್ 22 ಎಸೆತಗಳಲ್ಲಿ 32 ರನ್‌ಗಳಿಸಿದರಾದರೂ ತಂಡವನ್ನು ಗೆಲವಿನ ದಡಕ್ಕೆ ಸೇರಿಸಲು ವಿಫಲರಾದರು.


ಸ್ಕೋರ್ ಬೋರ್ಡ್

ಚೆನ್ನೈ ಸೂಪರ್ ಕಿಂಗ್ಸ್ 200/3 (20 ಓವರ್)

ವೃದ್ಧಿಮಾನ್ ಸಿ ಮಾರ್ಗನ್ ಬಿ ಭಾಟಿಯಾ 39(23), ಹಸ್ಸಿ ಸಿ ದಾಸ್ ಬಿ ನಾರಾಯಣ್ 95(59), ರೈನಾ ರನೌಟ್ (ದಾಸ್/ಬಾಲಾಜಿ) 44(25), ಧೋನಿ ಅಜೇಯ 18(12), ಜಡೇಜಾ ಅಜೇಯ 1(1), ಇತರೆ 3.

ವಿಕೆಟ್ ಪತನ: 1-103, 2-158, 3-190

ಬೌಲಿಂಗ್: ಪಠಾಣ್ 2-0-18-0, ಶಮಿ 2-0-20-0, ಬಾಲಾಜಿ 4-0-45-0, ನಾರಾಯಣ್ 4-0-35-1, ಕಾಲಿಸ್ 4-0-50-0, ಭಾಟಿಯಾ 4-0-31-1


ಕೋಲ್ಕತಾ ನೈಟ್ ರೈಡರ್ಸ್ 186/4 (20 ಓವರ್)

ಬಿಸ್ಲಾ ರನೌಟ್ (ಹಸ್ಸಿ) 92(61), ಗಂಭೀರ್ ಬಿ ಮೊರಿಸ್ 14(8), ಮೆಕಲಂ ಬಿ ಶರ್ಮಾ 6(7), ಕಾಲಿಸ್ ಸಿ ನ್ಯಾನಿಸ್ ಬಿ ಬ್ರಾವೊ 19(20), ಮಾರ್ಗನ್ ಅಜೇಯ 32(22), ಪಠಾಣ್ ಅಜೇಯ 3(3), ಇತರೆ 20.

ವಿಕೆಟ್ ಪತನ: 1-32, 2-63, 3-99, 4-178.

ಬೌಲಿಂಗ್: ನ್ಯಾನಿಸ್ 4-0-50-0, ಮೊಹಿತ್ 4-0-23-1, ಮೊರಿಸ್ 3-0-29-1, ಜಡೇಜಾ 2-0-13-0, ಅಶ್ವಿನ್ 3-0-26-0, ಬ್ರಾವೊ 4-0-37-1

ವೆಬ್ದುನಿಯಾವನ್ನು ಓದಿ