2ನೇ ಟೆಸ್ಟ್‌ನಿಂದ ಬ್ರಾಡ್ ಔಟ್; ಐಪಿಎಲ್‌ಗೂ ಅನುಮಾನ

ಶನಿವಾರ, 31 ಮಾರ್ಚ್ 2012 (16:15 IST)
WD
ಗಾಯದ ಸಮಸ್ಯೆಗೆ ತುತ್ತಾಗಿರುವ ಇಂಗ್ಲೆಂಡ್ ಆಲ್‌ರೌಂಡರ್ ಸ್ಟುವರ್ಟ್ ಬ್ರಾಡ್ ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸ್ಪಷ್ಟಪಡಿಸಿದೆ.

ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯ ಪಂದ್ಯವನ್ನು ಆಂಗ್ಲರ ಪಡೆ 75 ರನ್ನುಗಳಿಂದ ಹೀನಾಯವಾಗಿ ಕಳೆದುಕೊಂಡಿತ್ತು. ಇದರೊಂದಿಗೆ ಅಗ್ರಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದೆ. ಇದರ ಬೆನ್ನಲ್ಲೇ ಬ್ರಾಡ್ ಅಲಭ್ಯತೆಯು ತಂಡಕ್ಕೆ ಇನ್ನಷ್ಟು ಹೊಡೆತ ನೀಡುವಂತಾಗಿದೆ.

ಬ್ರಾಡ್ ಬದಲಿ ಆಟಗಾರನಾಗಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಫಿನ್ ಅಥವಾ ಟಿಮ್ ಬ್ರೆಸ್ಮನ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಸತತ ನಾಲ್ಕನೇ ಸೋಲಿಗೆ ಗುರಿಯಾಗಿರುವ ಆಂಡ್ರ್ಯೂ ಸ್ಟ್ರಾಸ್ ಪಡೆಗೆ ಕೊನೆಯ ಪಂದ್ಯ ನಿರ್ಣಾಯಕವೆನಿಸಿದೆ.

ಈ ನಡುವೆ ತೀವ್ರ ಒತ್ತಡದಲ್ಲಿರುವ ನಾಯಕ ಆಂಡ್ರ್ಯೂ ಸ್ಟ್ರಾಸ್ ಅವರಿಗೆ ಕೋಚ್ ಗ್ರಾಹಂ ಗೂಚ್ ಬೆಂಬಲ ವ್ಯಕ್ತಪಡಿಸಿದ್ದು, ಇಂಗ್ಲೆಂಡ್ ತಂಡವನ್ನು ಎಡಗೈ ಬ್ಯಾಟ್ಸ್‌ಮನ್ ಮುನ್ನಡೆಸಲಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ