ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್‌ನಲ್ಲಿ 505 ರನ್, 97 ರನ್ ಮುನ್ನಡೆ

ಶುಕ್ರವಾರ, 19 ಡಿಸೆಂಬರ್ 2014 (11:56 IST)
ಆಸ್ಟ್ರೇಲಿಯಾದ ಕೆಳಕ್ರಮಾಂಕದ ಆಟಗಾರರನ್ನು ಬೇಗನೇ ಔಟ್ ಮಾಡಲು ಭಾರತ ವಿಫಲವಾಗಿದ್ದರಿಂದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 97 ರನ್ ಮುನ್ನಡೆಯೊಂದಿಗೆ ನಿಯಂತ್ರಣ ಸಾಧಿಸಿದ್ದು, ಭಾರತದ ಆಟಗಾರರಿಗೆ ದುಃಸ್ವಪ್ನವಾಗಿ ಕಾಡಿದೆ. 4 ವಿಕೆಟ್‌ಗೆ 221 ರನ್ ಗಳಿಸಿ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ 109.4 ಓವರುಗಳಿಗೆ 505 ರನ್ ಗಳಿಸಿ ಆಲೌಟ್ ಆಗಿದ್ದಾರೆ.

ಕೊನೆಯಲ್ಲಿ 52 ರನ್ ಗಳಿಸಿದ್ದ ಸ್ಟಾರ್ಕ್ ಔಟಾದರು ಮತ್ತು ಹ್ಯಾಜಲ್‌ವುಡ್ 32 ರನ್‌‍ನೊಂದಿಗೆ ಅಜೇಯರಾಗಿ ಉಳಿದರು. 257ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ಪರ ಸ್ಟೀವನ್ ಸ್ಮಿತ್(133) ಮತ್ತು ಜಾನ್ಸನ್(88) ಅವರ 148 ರನ್‌ ಜೊತೆಯಾಟದಿಂದ ಚೇತರಿಸಿಕೊಂಡಿತು.

ಭೋಜನವಿರಾಮದ ನಂತರ ಸ್ಮಿತ್ ಮತ್ತು ಜಾನ್ಸನ್ ಎಚ್ಚರಿಕೆಯ ಆಟವಾಡಿದರು. ಇಶಾಂತ್ ಬೌಲಿಂಗ್‌ನಲ್ಲಿ ಜಾನ್ಸನ್ ಧೋನಿಗೆ ಕ್ಯಾಚಿತ್ತು ಔಟಾದರು. ಅದೇ ಓವರಿನಲ್ಲಿ ಸ್ಮಿತ್ ಇಶಾಂತ್ ಎಸೆತಕ್ಕೆ ಬೌಲ್ಡ್ ಆಗುವ ಮೂಲಕ ಸರಣಿಯಲ್ಲಿ ಮೊದಲ ಬಾರಿಗೆ ಔಟ್ ಆದರು. ಇಶಾಂತ್ ಶರ್ಮಾ ಮತ್ತು ತೇಜಸ್ವಿ ಯಾದವ್ ತಲಾ ಮೂರು ವಿಕೆಟ್ ಪಡೆದಿದ್ದಾರೆ. 

ವೆಬ್ದುನಿಯಾವನ್ನು ಓದಿ