ಕ್ರಿಕೆಟ್: ಮೂರನೇ ದಿನದಾಟದಂತ್ಯಕ್ಕೆ ಭಾರತ 462/8, ನಿರಾಶೆ ಮೂಡಿಸಿದ ಕನ್ನಡಿಗ ರಾಹುಲ್

ಭಾನುವಾರ, 28 ಡಿಸೆಂಬರ್ 2014 (13:16 IST)
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್‌ -ಗವಾಸ್ಕರ್‌ ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಭಾರತ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ಗೆ ತಕ್ಕ ಮಟ್ಟಿನ ತಿರುಗೇಟು ನೀಡಲು ಸಫಲವಾಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ದಾಖಲಿಸಿದ  530 ರನ್‌ಗಳ ಬೃಹತ್‌ ಮೊತ್ತಕ್ಕೆ ಉತ್ತರವಾಗಿ ಆಡಲಿಳಿದ ಭಾರತ ಮೂರನೇ ದಿನದಂತ್ಯಕ್ಕೆ 8 ವಿಕೆಟ್‌ ಕಳೆದುಕೊಂಡು 462 ರನ್‌ ಗಳಿಸಿದೆ.
 
ಮೂರನೇ ದಿನದಾಟವನ್ನು ಪ್ರಾರಂಭಿಸಿದ ವಿಜಯ್‌ ಮತ್ತು ಪೂಜಾರ ಬೇಗನೆ ಔಟಾದರು. ಮುರಳಿ ವಿಜಯ್ 68 ರನ್ ಗಳಿಸಿದರೆ, ಚೇತೇಶ್ವರ್ ಪೂಜಾರ 25 ಕ್ಕೆ ಕೈ ಚೆಲ್ಲಿದರು. ನಂತರ ಭಾರತಕ್ಕೆ ಆಸರೆಯಾದದ್ದು ಕೊಹ್ಲಿ ಮತ್ತು ರಹಾನೆ. ನಾಲ್ಕನೇ ವಿಕೆಟ್‌ಗೆ ಈ ಜೋಡಿ 250 ರನ್‌ಗಳ ಭರ್ಜರಿ ಆಟವನ್ನು ಪ್ರದರ್ಶಿಸಿತು. 147 ರನ್‌ ಗಳಿಸಿದ ರಹಾನೆ ಲಿಯಾನ್ ಎಲ್.ಬಿ. ಡಬ್ಲು ಬಲೆಗೆ ಬಿದ್ದರು. ಕೊಹ್ಲಿ ಮತ್ತು ರಹಾನೆ ಜೊತೆಯಾಟ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆಯಿತು. ಆದರೆ ಅವರ ನಂತರ ಬಂದ ಆಟಗಾರರಲ್ಲಿ ಯಾರು ಕೂಡ ಕ್ರೀಸ್‌ಗೆ ಅಂಟಿಕೊಳ್ಳುವ ಮನಸ್ಸು ಮಾಡಲಿಲ್ಲ. 
 
ಬಳಿಕ ಆಡಲಿಳಿದ ಕರ್ನಾಟಕದ ಕೆ.ಎಲ್‌.ರಾಹುಲ್‌ ತಮ್ಮ  ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ನಿರಾಶೆ ಮೂಡಿಸಿದರು. ಕೇವಲ ಎಂಟು ಎಸೆತಗಳನ್ನು ಎದುರಿಸಿದ ಅವರು ಸುಲಭದ ಕ್ಯಾಚ್‌ ನೀಡಿ ನಿರ್ಗಮಿಸಿದರು. ಅವರು ಗಳಿಸಿದ್ದು ಕೇವಲ 3 ರನ್‌ ಮಾತ್ರ. ಅವರ ಬಳಿಕ ಬಂದ ನಾಯಕ ಧೋನಿ 11 ರನ್ ಗಳಿಸಿ ಮರಳಿದರು.
 
ಭರ್ಜರಿ ಆಟ ಪ್ರದರ್ಶಿಸಿದ ವಿರಾಟ್ ಕೊಹ್ಲಿ  169 ರನ್ ಗಳಿಸಿ ಔಟಾದರು. 
 
ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ಮರಳಿದರೆ, ಮೊಹಮ್ಮದ್ ಶಾಮಿ 9 ರನ್ ಗಳಿಸಿ ಆಡುತ್ತಿದ್ದಾರೆ. 
 
ಆಸಿಸ್ ಪರ ಹ್ಯಾರಿಸ್ 4  ವಿಕೆಟ್, ಲಿಯಾನ್ 2 ವಿಕೆಟ್  ಮಿಚೆಲ್ ಜಾನ್ಸನ್,ಶೇನ್ ವ್ಯಾಟ್ಸನ್‌ಗೆ ತಲಾ ಒಂದು ವಿಕೆಟ್ ಪಡೆದರು. ಭಾರತ ಆಸ್ಟ್ರೇಲಿಯಾದ ಮೊತ್ತಕ್ಕೆ 68 ರನ್ ಹಿಂದಿದೆ.

ವೆಬ್ದುನಿಯಾವನ್ನು ಓದಿ