ಭಾರತ-ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ಭಾನುವಾರ, 26 ಅಕ್ಟೋಬರ್ 2014 (14:13 IST)
ಭಾರತ-ಶ್ರೀಲಂಕಾ ನಡುವಿನ ಏಕದಿನ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಶನಿವಾರ ಅಂತಿಮಗೊಳಿಸಿದೆ. 5 ಪಂದ್ಯಗಳ ಈ ಸರಣಿ ನ. 2ರಿಂದ ಕಟಕ್‌ನಲ್ಲಿ ಆರಂಭವಾಗಿ, ನ. 16ರ ರಾಂಚಿ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.
 
ಏಕದಿನ ಸರಣಿಗೂ ಮುನ್ನ ಪ್ರವಾಸಿ ಶ್ರೀಲಂಕಾ ತಂಡ ಭಾರತ 'ಎ' ತಂಡದೊಂದಿಗೆ ಅ. 30ರಂದು ಏಕದಿನ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ. ಇದರ ಆತಿಥ್ಯ ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂ ಪಾಲಾಗಿದೆ.
 
ಅಹಮದಾಬಾದ್‌, ಹೈದರಾಬಾದ್‌ ಹಾಗೂ 'ಈಡನ್‌ ಗಾರ್ಡನ್ಸ್‌'ನ 150ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕೋಲ್ಕತಾದಲ್ಲಿ ಸರಣಿಯ 2ನೇ, 3ನೇ ಹಾಗೂ 4ನೇ ಪಂದ್ಯ ನಡೆಯಲಿದೆ. ನ. 18ರಂದು ಶ್ರೀಲಂಕಾ ಕ್ರಿಕೆಟಿಗರು ಕೊಲಂಬೋಗೆ ವಾಪಸಾಗಲಿದ್ದಾರೆ.
 
ವೆಸ್ಟ್‌ ಇಂಡೀಸ್‌ ಧರ್ಮಶಾಲಾದ 4ನೇ ಏಕದಿನ ಪಂದ್ಯದ ಬಳಿಕ ಭಾರತ ಪ್ರವಾಸವನ್ನು ಅರ್ಧದಲ್ಲೇ ಕೈಬಿಟ್ಟು ತವರಿಗೆ ವಾಪಸಾಗಿತ್ತು. ಈ ಅನಪೇಕ್ಷಿತ ವಿದ್ಯಮಾನದ ಬಳಿಕ ಬಿಸಿಸಿಐ ಶ್ರೀಲಂಕಾವನ್ನು ದಿಢೀರ್‌ ಸರಣಿಗಾಗಿ ಆಹ್ವಾನಿಸಿತ್ತು. ಇದಕ್ಕೆ ಕೆಲವು ಲಂಕಾ ಆಟಗಾರರು ಅಪಸ್ವರವೆತ್ತಿದರೂ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬಿಸಿಸಿಐ ಆಹ್ವಾನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿತು. ಇದಕ್ಕೆ ಪ್ರತಿಯಾಗಿ 2015ರ ಜುಲೈ-ಆಗಸ್ಟ್‌ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾದಲ್ಲಿ ಟೆಸ್ಟ್‌ ಸರಣಿಯನ್ನಾಡಬೇಕಿದೆ.
 
ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ತಾಣವಾದ ಕಟಕ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕೈಕ ಟಿ-20 ಪಂದ್ಯ ನಡೆಯಬೇಕಿತ್ತು. ಹಾಗೆಯೇ ಹೈದರಾಬಾದ್‌, ಬೆಂಗಳೂರು ಮತ್ತು ಅಹಮದಾಬಾದ್‌ ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್‌ ಸರಣಿಯ ತಾಣಗಳಾಗಿದ್ದವು. ಇದರಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದೆರಡು ಕೇಂದ್ರಗಳಿಗೆ ಲಂಕಾ ವಿರುದ್ಧದ ಏಕದಿನ ಪಂದ್ಯವನ್ನು ಆಡಿಸುವ ಅವಕಾಶ ಲಭಿಸಿದೆ. ಬೆಂಗಳೂರನ್ನು ಧೋನಿ ತವರಾದ ರಾಂಚಿ ಹಿಮ್ಮೆಟ್ಟಿಸಿತು. ಬಿಸಿಸಿಐ ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳ ತಾಣಗಳಿಗಾಗಿ ಪ್ರತ್ಯೇಕ ಆವರ್ತನ ಪದ್ಧತಿಯನ್ನು ಅನುಸರಿಸುತ್ತಿರುವುದು ಗಮನಾರ್ಹ.
 
ಭಾರತ-ಶ್ರೀಲಂಕಾ ಸರಣಿ ವೇಳಾಪಟ್ಟಿ
 
ದಿನಾಂಕ ಪಂದ್ಯ ಸ್ಥಳ ಆರಂಭ
 
ಅ. 30 ಭಾರತ 'ಎ'-ಲಂಕಾ ಮುಂಬಯಿ ಬೆಳಗ್ಗೆ 9.00
 
ನ. 2 ಮೊದಲ ಏಕದಿನ ಕಟಕ್‌ ಮಧ್ಯಾಹ್ನ 2.30
 
ನ. 6 ಎರಡನೇ ಏಕದಿನ ಅಹಮದಾಬಾದ್‌ ಮಧ್ಯಾಹ್ನ 2.30
 
ನ. 9 ಮೂರನೇ ಏಕದಿನ ಹೈದರಾಬಾದ್‌ ಮಧ್ಯಾಹ್ನ 2.30
 
ನ. 13 ನಾಲ್ಕನೇ ಏಕದಿನ ಕೋಲ್ಕತಾ ಮಧ್ಯಾಹ್ನ 2.30
 
ನ. 16 ಐದನೇ ಏಕದಿನ ರಾಂಚಿ ಮಧ್ಯಾಹ್ನ 2.30
 

ವೆಬ್ದುನಿಯಾವನ್ನು ಓದಿ