ಧರ್ಮಶಾಲಾದಲ್ಲಿಂದು ನಿರ್ಣಾಯಕ ಪಂದ್ಯ : ಪೈಪೋಟಿಯ ಹೋರಾಟದ ನಿರೀಕ್ಷೆ

ಶುಕ್ರವಾರ, 17 ಅಕ್ಟೋಬರ್ 2014 (09:13 IST)
ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ  ಭಾರತ ಮತ್ತು ವಿಂಡಿಸ್ ನಾಲ್ಕನೇ ಏಕದಿನ ಪಂದ್ಯವನ್ನಾಡಲಿದ್ದು, ಪೈಪೋಟಿಯ ಹೋರಾಟವನ್ನು ನಿರೀಕ್ಷಿಸಲಾಗಿದೆ. 

ಎರಡು ತಂಡಗಳು 1-1 ಸಮಬಲ ಸಾಧಿಸಿದ್ದು ಇಂದಿನ ಪಂದ್ಯ ನಿರ್ಣಾಯಕ ಪಂದ್ಯ ಎನಿಸಲಿದೆ. 
 
ಕೊಚ್ಚಿಯಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ವಿಂಡಿಸ್ ಅಬ್ಬರದಲ್ಲಿ ಕೊಚ್ಚಿ ಹೋಗಿದ್ದ ಧೋನಿ ಪಡೆ, ದಿಲ್ಲಿಯ ಕೋಟ್ಲಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಜಯದ ಲಯಕ್ಕೆ ಹಿಂತಿರುಗಿ 5 ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಮಾಡಿಕೊಂಡಿತ್ತು, ಇದೀಗ 4ನೇ ಪಂದ್ಯದಲ್ಲಿಯೂ ಗೆದ್ದು ಸರಣಿ ಮೇಲುಗೈ ಸಾಧಿಸುವತ್ತ ಚಿತ್ತ ಹರಿಸಿದೆ. 
 
ವಿಶಾಖಪಟ್ಟಣಂನಲ್ಲಿ ನಡೆಯಬೇಕಿದ್ದ ಮೂರನೇ ಏಕದಿನ ಪಂದ್ಯ ಹುಡ್‌ಹುಡ್ ಚಂಡಮಾರುತದ ಪರಿಣಾಮ ರದ್ದಾಗಿತ್ತು. 
 
ದಿಲ್ಲಿಯ ಕೋಟ್ಲಾ ಅಂಗಳದಲ್ಲಿ ಸ್ಪಿನ್ ಬೌಲರ್‌ಗಳಾದ ರವೀಂದ್ರ ಜಡೇಜಾ ಹಾಗೂ ಅಮಿತ್ ಮಿಶ್ರಾ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಸ್ಪಿನ್ ದಾಳಿಗೆ ನಲುಗಿದ ವಿಂಡೀಸ್ ಕೇವಲ 45 ರನ್‌ಗಳಿಂದ ಸೋಲಿಗೆ ಶರಣಾಗಿತ್ತು.
 
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ, ತಂಡ ಸೇರಿದ್ದು ಬೌಲಿಂಗ್ ದಾಳಿಗೆ ಹೆಚ್ಚಿನ ಬಲ ಬಂದಂತಾಗಿದೆ.
 
ಸತತ ಬ್ಯಾಟಿಂಗ್ ವೈಫಲ್ಯದಿಂದ ನಿರಾಶೆ ಮೂಡಿಸಿದ್ದ ವಿರಾಟ್ ಕೊಹ್ಲಿ, ದಿಲ್ಲಿಯ ಕೊಟ್ಲಾ ಅಂಗಳದಲ್ಲಿ ಅರ್ಧ ಶತಕ ಗಳಿಸಿ ಲಯಕ್ಕೆ ಮರಳಿರುವುದು ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಸಿದ್ದು ಇಂದು ಸಹ ಇವರು ಅಬ್ಬರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. 
 
ಕ್ಯಾಪ್ಟನ್ ಕೂಲ್‌ಗೆ ಇದು 250 ನೇ ಪಂದ್ಯವಾಗಿದ್ದು, ಧೋನಿ ಬಾಯ್ಸ್ ತಮ್ಮ ನಾಯಕನಿಗೆ ಗೆಲುವಿನ ಸಿಹಿ ತಿನ್ನಿಸುವ ಉತ್ಸಾಹದಲ್ಲಿದ್ದಾರೆ.  
 
ತಂಡಗಳು ಇಂತಿವೆ:
 
ಭಾರತ: ಎಂ.ಎಸ್ ಧೋನಿ (ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಅಕ್ಷರ್ ಪಟೇಲ್  ಮುರಳಿ ವಿಜಯ್, ಹಾಗೂ ಕುಲ್‌ದೀಪ್ ಯಾದವ್.
 
ವೆಸ್ಟ್ ಇಂಡೀಸ್: ಡ್ವೇನ್ ಬ್ರಾವೋ (ನಾಯಕ), ಡರೆನ್ ಬ್ರಾವೊ, ಜೇಸನ್ ಹೋಲ್ಡರ್, ಲಿಯಾನ್ ಜಾನ್ಸನ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದಿನ್, ರವಿ ರಾಂಪಾಲ್, ಕಿಮಾರ್ ರೋಚ್, ಆ್ಯಂಡ್ರೆ ರಸಲ್, ಲೆಂಡಲ್ಸ್ ಸಿಮೊನ್ಸ್, ಡ್ವೇನ್ ಸ್ಮಿತ್, ಡರೆನ್ ಸಾಮಿ ಹಾಗೂ ಜೆರೋಮ್ ಟೇಲರ್.

ವೆಬ್ದುನಿಯಾವನ್ನು ಓದಿ