ಭಾರತದ ಆಟಗಾರರ ಪೆವಿಲಿಯನ್ ಪರೇಡ್ ಮುಂದುವರಿಕೆ

ಶನಿವಾರ, 16 ಆಗಸ್ಟ್ 2014 (16:53 IST)
ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲೂ ಕೂಡ ಭಾರತದ್ದು ಅದೇ ಕಥೆ, ಅದೇ ವ್ಯಥೆ. ಮತ್ತೊಮ್ಮೆ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಕುಸಿತ ಅನುಭವಿಸಿದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪರೇಡ್ ಮಾಡಿದರು. ಆಟ ಮುಗಿದಾಗ ಭಾರತದ ಅತ್ಯಲ್ಪ ಸ್ಕೋರಾದ 148ಕ್ಕೆ ಉತ್ತರವಾಗಿ ಇಂಗ್ಲೆಂಡ್ ಯಾವುದೇ ವಿಕೆಟ್ ಇಲ್ಲದೇ 62 ರನ್ ಬಾರಿಸಿದೆ.

ಇಂಗ್ಲೆಂಡ್ ನಾಯಕ ಕುಕ್ ಅಜೇಯ 24 ಮತ್ತು ರಾಬ್ಸನ್ ಅಜೇಯ 33 ರನ್ ಗಳಿಸಿ ಆಡುತ್ತಿದ್ದು, ಸರಣಿಯನ್ನು 2-1ರಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಭಾರತ ತಂಡದ ಆಟದಲ್ಲಿ ಧೋನಿ ಒಬ್ಬರೇ ವಿಕೆಟ್‌ನಲ್ಲಿ ಗಟ್ಟಿಯಾಗಿ ನಿಂತು ಆಡಿದವರು. ಧೋನಿ ಭಾರತದ ಅರ್ಧಕ್ಕಿಂತ ಹೆಚ್ಚು ಸ್ಕೋರ್ ಹೊಡಂದು 82 ರನ್ ಗಳಿಸಿದರು. ಭಾರತದ ತಂಡದಲ್ಲಿ ದ್ವಿಸಂಖ್ಯೆ ಗಳಿಸಿದವರು ಧೋನಿಯನ್ನು ಬಿಟ್ಟರೆ ಮುರಳಿ ವಿಜಯ್(18) ಮತ್ತು ರವಿಚಂದ್ರನ್ ಅಶ್ವಿನ್ ( 13).

ಇಂಗ್ಲೆಂಡ್ ಕಡೆ ವೇಗಿಗಳಾದ ಕ್ರಿಸ್ ವೋಕ್ಸ್ ಮತ್ತು ಕ್ರಿಸ್ ಜೋರ್ಡಾನ್ ತಲಾ ಮೂರು ವಿಕೆಟ್ ಪಡೆದರು. ಆಂಡರ್‌ಸನ್ ಮತ್ತು ಸ್ಟಾರ್ಟ್ ಬ್ರಾಡ್ ಎರಡು ವಿಕೆಟ್ ಪಡೆದರು. ಭಾರತದ ಉನ್ನತ ಕ್ರಮಾಂಕದ ಆಟಗಾರರು ಮತ್ತೆ ಇಂಗ್ಲೆಂಡ್ ವೇಗಿಗಳನ್ನು ಎದುರಿಸಲು ತಿಣುಕಾಡಿದರು.ವಿರಾಟ್ ಕೊಹ್ಲಿ ಅವರ ಶೋಚನೀಯ ಕಳಪೆ ಆಟ ಪುನಃ ಮುಂದುವರಿದಿದ್ದು, ಕ್ರಿಸ್ ಗೋರ್ಡನ್ ಅವರಿಗೆ ಕೇವಲ 6 ರನ್ನುಗಳಿಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಪ್ರತಿಭಾನ್ವಿತ ಆಟಗಾರ ಎನಿಸಿದ್ದ ಅವರು 9 ಇನ್ನಿಂಗ್ಸ್‌ನಲ್ಲಿ ಹೊಡೆದಿದ್ದು ಕೇವಲ 114 ರನ್ನುಗಳು. 

ವೆಬ್ದುನಿಯಾವನ್ನು ಓದಿ