ಕಳಪೆ ಪ್ರದರ್ಶನದ ದಾಖಲೆ ಮುರಿದ ವಿರಾಟ್ ಕೊಹ್ಲಿ, ಪೂಜಾರ್

ಮಂಗಳವಾರ, 19 ಆಗಸ್ಟ್ 2014 (11:24 IST)
ಇತ್ತೀಚಿಗೆ ಮುಕ್ತಾಯಗೊಂಡ ಭಾರತ- ಇಂಗ್ಲೆಂಡ್  ಟೆಸ್ಟ್ ಸರಣಿಯಲ್ಲಿ ಅತಿ ಕಳಪೆ ಆಟ ಪ್ರದರ್ಶಿಸುವ ಮೂಲಕ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ್  ಹೊಸ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದು, ಮೇಲಿನ ಕ್ರಮಾಂಕದ  ಈ ಬ್ಯಾಟ್ಸಮನ್‌ಗಳ ಬ್ಯಾಟಿಂಗ್ ಸರಾಸರಿ  ಕೆಳ ಕ್ರಮಾಂಕದ ಆಟಗಾರರಿಗಿಂತ ಕಡಿಮೆಯಾಗಿದೆ.

ಈ ಸರಣಿಯಲ್ಲಿ ಕೊಹ್ಲಿ ತಾವಾಡಿದ 10 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದುದು 13,40 ರ ಸರಾಸರಿಯ 134 ರನ್. ಆಸಕ್ತಿಕರ ವಿಷಯವೆಂದರೆ ಈ ರನ್‌ಗಳಿಗಿಂತ ಭಾರತಕ್ಕೆ ಸಿಕ್ಕ  ಹೆಚ್ಚುವರಿ ರನ್ ಸಂಖ್ಯೆ ಹೆಚ್ಚು. ಸರಣಿಯಲ್ಲಿ ಭಾರತಕ್ಕೆ 177 ಹೆಚ್ಚುವರಿ ರನ್‌ಗಳು ದೊರಕಿದ್ದವು. ಅಲ್ಲದೇ ಕೆಳ ಕ್ರಮಾಂಕದಲ್ಲಿ ಆಡುವ ರವೀಂದ್ರ ಜಡೇಜಾರವರು ಕೂಡ ತಾವಾಡಿದ 8 ಇನ್ನಿಂಗ್ಸ್‌ಗಳಲ್ಲಿ ಇಷ್ಟೇ ರನ್ ಗಳಿಸಿದ್ದರು. 
 
ಕೊಹ್ಲಿಯಂತೆ ಶಿಖರ್ ಧವನ್ (122)  ಮತ್ತು ಸ್ಟುವರ್ಟ್ ಬಿನ್ನಿ (118) ಯವರು ಕೂಡ  ಹೆಚ್ಚುವರಿ ರನ್‌ಗಳಿಗಿಂತ ಕಡಿಮೆ ಮೊತ್ತವನ್ನು ದಾಖಲಿಸಿದ್ದಾರೆ. ಮೇಲಿನ 4 ಕ್ರಮಾಂಕದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಇನ್ನಿಂಗ್ಸ್ ಆಡಿ ಕಡಿಮೆ ಮೊತ್ತ ದಾಖಲಿಸಿದ ಬ್ಯಾಟ್ಸಮನ್‌ಗಳ ವಿಶ್ವ ಮಟ್ಟದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.  
 
ವಿಶೇಷವೆಂದರೆ  ಈ ಪಟ್ಟಿಯಲ್ಲಿ ಮೊದಲೇ ಸ್ಥಾನದಲ್ಲಿರುವ ಆಟಗಾರ ಕೂಡ ಭಾರತೀಯನೇ ಆಗಿದ್ದು, 1947-48 ನೇ ವರ್ಷದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಚಂದು ಸರವಟೆ  10 ಇನ್ನಿಂಗ್ಸ್‌ಗಳಲ್ಲಿ  ಕೇವಲ 100 ರನ್ ಕಲೆ ಹಾಕಿದ್ದರು. 
 
ಇಂಗ್ಲೆಂಡ್‌ನ  ಮ್ಯಾಟ್ ಪ್ರಿಯರ್ ಮತ್ತು ಬೆನ್ ಸ್ಟೋಕ್ಸ್  ಹೊರತು ಪಡಿಸಿದರೆ  ಉಳಿದ ಎಲ್ಲ ಆಟಗಾರರ  ಸರಾಸರಿ ಕೊಹ್ಲಿಗಿಂತ ಉತ್ತಮವಾಗಿದೆ.  
 
ಪೂಜಾರರ ಕುರಿತು ಹೇಳುವುದಾದರೆ ಭಾರತ ತಂಡದ 3ನೇ ಕ್ರಮಾಂಕದ ಆಟಗಾರನಾಗಿ ಅವರ ಇಂಗ್ಲೆಂಡ್ ಪ್ರವಾಸದಲ್ಲಿನ ಪ್ರದರ್ಶನ ಎಲ್ಲರಿಗಿಂತ ಕಳಪೆಯಾಗಿದೆ. 
 
ಪೂಜಾರ 10 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 22.20 ಸರಾಸರಿಯ 222 ರನ್. ಇಂಗ್ಲೆಂಡ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 3ನೇ ಕ್ರಮಾಂಕದ ಆಟಗಾರನೊಬ್ಬನ ಅತಿ ಹೀನಾಯ ಪ್ರದರ್ಶನವಿದು. 
 
ಇವರಿಗಿಂತ ಮೊದಲು ರಾಹುಲ್ ದ್ರಾವಿಡ್ 2007ರಲ್ಲಿ 6 ಇನ್ನಿಂಗ್ಸ್‌ಗಳಲ್ಲಿ ಆಡಿ ಕೇವಲ (25.20 ಸರಾಸರಿ) 126 ರನ್ ಸಂಪಾದಿಸಿದ್ದರು.  ಆದರೆ ಅವರ ರನ್ ಸರಾಸರಿ ಪೂಜಾರ್‌‌ಗಿಂತ ಸ್ವಲ್ಪ ಉತ್ತಮವಿದೆ.

ವೆಬ್ದುನಿಯಾವನ್ನು ಓದಿ