ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾದ ಎನ್ ಶ್ರೀನಿವಾಸನ್

ಗುರುವಾರ, 26 ಜೂನ್ 2014 (12:55 IST)
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷರಾಗಿ ಎನ್ ಶ್ರೀನಿವಾಸನ್ ಆಯ್ಕೆಯಾಗಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಶ್ರೀನಿವಾಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.   

ಕ್ರಿಕೆಟ್ ಜಗತ್ತಿನಲ್ಲಿ ಅತಿ ಪವರ್‌ಪುಲ್ ವ್ಯಕ್ತಿ ಎಂದು ಗುರುತಿಸಲ್ಪಡುವ 69 ವರ್ಷದ ಚೆನ್ನೈ ಉದ್ದಿಮೆದಾರ ಈ ಮೊದಲು ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ  ಕಾರ್ಯನಿರ್ವಹಿಸಿದ್ದರು. ಐಪಿಎಲ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯನ ಹೆಸರು ಕಂಡುಬಂದಿದ್ದರಿಂದ ಅವರನ್ನು  ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸುಪ್ರೀಕೋರ್ಟ್ ಆದೇಶ ನೀಡಿತ್ತು.
 
ಐಸಿಸಿ ಅಧ್ಯಕ್ಷನ ಸ್ಥಾನಕ್ಕೆ ಶ್ರೀನಿವಾಸನ್ ಹೆಸರನ್ನು ಬಿಸಿಸಿಐ ಶಿಫಾರಸ್ಸು ಮಾಡಿತ್ತು. ಇನ್ನು 2 ವರ್ಷಗಳ ಕಾಲ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದಾರೆ. 
 
52 ಸದಸ್ಯರ ಕಾರ್ಯಕಾರಿಣಿ ಸಭೆಯ ನಂತರ  ತಮಗೆ ಉನ್ನತ ಹುದ್ದೆ ಲಭಿಸುವುದು ಖಚಿತವಾದ ಮೇಲೆ ಮಾತನಾಡುತ್ತಿದ್ದ ಶ್ರೀನಿವಾಸನ್ ಐಸಿಸಿ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ತುಂಬ ಗೌರವದ ವಿಷಯ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ