ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಪ್ರಬಲ ಎದುರಾಳಿ ತಂಡ: ರಾಹುಲ್ ದ್ರಾವಿಡ್

ಬುಧವಾರ, 28 ಜನವರಿ 2015 (18:39 IST)
ಫೆಬ್ರವರಿ 14 ರಿಂದ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ ಸಮರದಲ್ಲಿ ನ್ಯೂಜಿಲೆಂಡ್ ತಂಡ ಕಠಿಣ ಸ್ಪರ್ಧೆಯೊಡ್ಡುವ ಸಾಧ್ಯತೆಗಳಿವೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ. 
 
ನ್ಯೂಜಿಲೆಂಡ್ ತಂಡದಲ್ಲಿ ಅತ್ಯುತ್ತಮ ವೇಗದ ಬೌಲರ್‌ಗಳಿರುವುದರಿಂದ ಎದುರಾಳಿ ತಂಡಗಳು ತುಂಬಾ ಆಲೋಚಿಸಿ ರಣತಂತ್ರ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ನನ್ನ ಅನಿಸಿಕೆಯ ಪ್ರಕಾರ ವಿಶ್ವಕಪ್ 2015ರ ಫೇವರೇಟ್ ತಂಡಗಳಲ್ಲಿ ನ್ಯೂಜಿಲೆಂಡ್ ಕೂಡಾ ಒಂದು. ತವರಿನ ಬೆಂಬಲ ಕೂಡಾ ನ್ಯೂಜಿಲೆಂಡ್‌ಗೆ ಮತ್ತಷ್ಟು ಬಲವನ್ನು ತಂದುಕೊಡುತ್ತದೆ ಎಂದು ತಿಳಿಸಿದ್ದಾರೆ. 
 
ನ್ಯೂಜಿಲೆಂಡ್ ತುಂಬಾ ಚಿಕ್ಕ ದೇಶ. ಆದರೆ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಅಭಿಮಾನಿಗಳು ಬಯಸುವುದರಿಂದ ತಂಡದ ಆಟಗಾರರು ಗೆಲುವಿನತ್ತ ಮುನ್ನಗ್ಗಲು ಪ್ರಯತ್ನಿಸುತ್ತಾರೆ. ನ್ಯೂಜಿಲೆಂಡ್ ಆಟಗಾರರ ಮೇಲೆ ಒತ್ತಡವಿರುವುದಿಲ್ಲ ಎನ್ನುವುದು ನನ್ನ ಅನಿಸಿಕೆಯಾಗಿದೆ ಎಂದರು. 
 
ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕುಲಮ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡದ ಅನುಭವಿ ಆಟಗಾರರು ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಬಹುದು ಎಂದು ಹೇಳಿದ್ದಾರೆ.
 
ಉತ್ತಮ ಫಾರ್ಮ್‌ನಲ್ಲಿರುವ ಕಾನೆ ವಿಲಿಯಮ್ಸನ್ ಮೂರನೇ ಕ್ರಮಾಂಕದಲ್ಲಿ ಆಡುವುದರಿಂದ ನ್ಯೂಜಿಲೆಂಡ್ ತಂಡಕ್ಕೆ ವರವಾಗಲಿದ್ದಾರೆ. ಎದುರಾಳಿಗಳಿಗೆ ಆಘಾತ ಮೂಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಜಿ ಟೀಂ ಇಂಡಿಯಾ ತಂಡದ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ