ಮಹಿಳಾ ಬಾಕ್ಸರ್ ಸರಿತಾ ದೇವಿ ಪರ ಸಚಿನ್ ಬ್ಯಾಟಿಂಗ್

ಗುರುವಾರ, 20 ನವೆಂಬರ್ 2014 (12:53 IST)
ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ಪದಕ ಸ್ವೀಕರಿಸಲು ನಿರಾಕರಿಸಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದ ಭಾರತದ ಮಹಿಳಾ ಬಾಕ್ಸರ್ ಲೇಶ್ರಮ್ ಸರಿತಾ ದೇವಿ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಕ್ರಿಕೆಟ್ ದಂತಕತೆ, ಮಾಸ್ಟರ್-ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 
ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಸರಿತಾ 57-60 ಕೆ.ಜಿ ವಿಭಾಗದಲ್ಲಿ ಸೆಣಸುವಾಗ ರೆಫರಿ ಆಕೆಯ ವಿರುದ್ಧ ತೀರ್ಪು ನೀಡಿದ್ದರು. ಇದರಿಂದ ತೀವ್ರ ನೊಂದುಕೊಂಡಿದ್ದ ಸರಿತಾ, ಪದಕ ಪ್ರಧಾನ ಸಮಾರಂಭದ ವೇಳೆ ತಾವು ಗೆದ್ದ ಕಂಚಿನ ಪದಕದ ಹಾರವನ್ನು ಕೊರಳಿಗೆ ಹಾಕಿಸಿಕೊಳ್ಳದೇ ಕೈಯಿಂದ ಅದನ್ನು ಸ್ವೀಕರಿಸಿದ್ದರು. ಅಷ್ಟೇ ಅಲ್ಲದೇ, ತಾನು ಸೋತಿದ್ದ ಎದುರಾಳಿ ಆಟಗಾರ್ತಿಯ ಬಳಿ ಹೋಗಿ ಆ ಹಾರವನ್ನು ಆಕೆಯ ಕೊರಳಿಗೆ ಹಾಕಿ ಬಂದಿದ್ದರು.
 
ಸರಿತಾರ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಕಳೆದ ತಿಂಗಳು ಆಕೆಯ ಮೇಲೆ ನಿಷೇಧದ ಶಿಕ್ಷೆ ವಿಧಿಸಿತು. ಇದೀಗ ವಿಶ್ವ ಬಾಕ್ಸಿಂಗ್, ಆಕೆಯನ್ನು ಆಜೀವ ನಿಷೇಧಕ್ಕೆ ಗುರಿಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.
 
ಆದರೆ, ಇದೀಗ ಸಚಿನ್ ತೆಂಡೂಲ್ಕರ್ ಆಕೆಯ ಬೆಂಬಲಕ್ಕೆ ಬಂದಿದ್ದಾರೆ. ಜೊತೆಗೆ ಕಳೆದ ವಾರ ಯುವಜನ ಸೇವಾ ಮತ್ತು ಕ್ರಿಡಾ ಸಚಿವ ಸರ್ಬಾನಂದ ಸೋನೊವಾಲ್ ಅವರಿಗೂ ಪತ್ರವೊಂದನ್ನು ಬರೆದು ಸರಿತಾಗೆ ಪೂರ್ಣ ಬೆಂಬಲ ಸೂಚಿಸುವಂತೆ ಕೋರಿದ್ದಾರೆ. ಆಕೆಯ ವೃತ್ತಿ ಬದುಕು ಅಪಾಯದಲ್ಲಿ ಸಿಲುಕಿದ್ದು, ಅದು ಕೊನೆಗೊಳ್ಳಬಾರದು. ಆಕೆಯ ಬಾಕ್ಸಿಂಗ್ ಕೌಶಲ ಇನ್ನೂ ಉನ್ನತಮಟ್ಟದಲ್ಲಿ ಬೆಳಗುವಂತಾಗಬೇಕು. ಹಾಗಾಗಿ, ಆಕೆಗೆ ಸರ್ಕಾರದ ಸಂಪೂರ್ಣ ಬೆಂಬಲದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ