ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮರುನೇಮಿಸುವಂತೆ ಶ್ರೀನಿವಾಸನ್ ಒತ್ತಾಯ

ಶುಕ್ರವಾರ, 21 ನವೆಂಬರ್ 2014 (17:33 IST)
ತಮಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡುವಂತೆ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಬಿಸಿಸಿಐನಲ್ಲಿ ತಮ್ಮ ಬಗ್ಗೆ ಯಾರಿಗೂ ವಿರೋಧವಿಲ್ಲ.

ಮುದ್ಗಲ್ ಸಮಿತಿ ನನ್ನನ್ನು ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಆರೋಪಮುಕ್ತನಾಗಿ ಮಾಡಿರುವುದರಿಂದ ನನ್ನನ್ನು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮರುನೇಮಕ ಮಾಡಬೇಕು ಎಂದು ಶ್ರೀನಿವಾಸನ್ ಒತ್ತಾಯಿಸಿದರು. ಶ್ರೀನಿವಾಸನ್ ಮತ್ತು ಅವರ ಅಳಿಯ ಮೇಯಪ್ಪನ್ ವಿರುದ್ದ ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಶ್ರೀನಿವಾಸನ್ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಯಾವುದೇ ಪಾತ್ರವಹಿಸಿಲ್ಲ ಎಂದು ಮುದ್ಗಲ್ ಸಮಿತಿ ವರದಿಯಲ್ಲಿ ಹೇಳಿರುವುದರಿಂದ ತಮ್ಮನ್ನು ಮತ್ತೆ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ನೇಮಿಸುವಂತೆ ಶ್ರೀನಿವಾಸನ್ ಒತ್ತಾಯಿಸಿದ್ದಾರೆ.

ಪ್ರಕರಣ ವಿಚಾರಣೆ ನ.24ಕ್ಕೆ ನಡೆಯಲಿದೆ. ಪೂರ್ವ ವಲಯದ ಘಟಕಗಳ ಬೆಂಬಲದೊಂದಿಗೆ ಬಿಸಿಸಿಐ ಅಧ್ಯಕ್ಷರಾಗಿ ಇನ್ನೊಂದು ಅವಧಿಯತ್ತ ಶ್ರೀನಿವಾಸನ್ ಕಣ್ಣು ಬಿದ್ದಿದೆ. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮುದ್ಗಲ್ ವರದಿಯಲ್ಲಿ ಬೆಟ್ಟಿಂಗ್ ಆರೋಪ ಎದುರಿಸುತ್ತಿರುವುದರಿಂದ ಚೆನ್ನೈ ತಂಡಕ್ಕೆ ಅಮಾನತಿನ ಭೀತಿ ಎದುರಾಗಿದ್ದು, ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರದ್ದುಮಾಡದಂತೆ ಶ್ರೀನಿವಾಸನ್ ವಕೀಲರು ಸುಪ್ರೀಂಕೋರ್ಟ್‌ಗೆ ಆಗ್ರಹಿಸಿದರು.

 ಚೆನ್ನೈ ತಂಡವನ್ನು ರದ್ದುಮಾಡಲು ಯಾವುದೇ ಆಧಾರವಿಲ್ಲ. ಇನ್ನೊಬ್ಬ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಜೊತೆ ಆಡಿದ ಒಂದು ಪಂದ್ಯಕ್ಕೆ ಸಂಬಂಧಿಸಿದಂತೆ ಅಪಕೀರ್ತಿ ತಂದಿದೆ ಎಂಬ ಸಿಎಸ್‌ಕೆ ವಿರುದ್ಧ ಆರೋಪವೂ ರುಜುವಾತಾಗಿಲ್ಲ. ಮುದ್ಗಲ್ ಸಮಿತಿ ಈ ಕುರಿತು ಯಾವುದೇ ವರದಿ ನೀಡಿಲ್ಲ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ