ಸುಪ್ರೀಂಕೋರ್ಟ್ ತೀರ್ಪು: ಇಂದು ಶ್ರೀನಿವಾಸನ್, ಚೆನ್ನೈ ಸೂಪರ್ ಕಿಂಗ್ಸ್ ಹಣೆಬರಹ ನಿರ್ಧಾರ

ಗುರುವಾರ, 22 ಜನವರಿ 2015 (10:45 IST)
ಸುಮಾರು 18 ತಿಂಗಳ ವಿಚಾರಣೆ ಬಳಿಕ 2013 ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತನ್ನ ಅಂತಿಮ ತೀರ್ಪನ್ನು ನೀಡಲಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಮತ್ತು ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಣೆಬರಹ ನಿರ್ಧಾರವಾಗಲಿದೆ.

ಶ್ರೀನಿವಾಸನ್ ಇನ್ನೊಂದು ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಲು ಬಯಸಿರುವ ನಡುವೆ, ಹಿತಾಸಕ್ತಿ ಸಂಘರ್ಷದ ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ. ಅವರ ಅಳಿಯ ಗುರುನಾಥ್ ಮೈಯಪ್ಪನ್ ಬೆಟ್ಟಿಂಗ್ ಆರೋಪಕ್ಕೆ ಗುರಿಯಾಗಿದ್ದಾರೆ.
 
 ಕಳೆದ ಡಿ. 17ರಂದು ಸುಪ್ರೀಂಕೋರ್ಟ್ ಐಪಿಎಲ್ ಭ್ರಷ್ಟಾಚಾರದ ಬಗ್ಗೆ ಅಂತಿಮ ಸುತ್ತಿನ ವಾದಗಳನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತು. ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯ ವರ್ಮಾ ಬಿಸಿಸಿಐ ಐಪಿಎಲ್ ಭ್ರಷ್ಟಾಚಾರ ಕುರಿತು ರಚಿಸಿದ  ಮುಂಚಿನ ಇಬ್ಬರು ಸದಸ್ಯರ ತನಿಖಾ ಸಮಿತಿಯ ವಿರುದ್ಧ ಹಿತಾಸಕ್ತಿ ಸಂಘರ್ಷದ ಪ್ರಶ್ನೆಗಳನ್ನು ಎತ್ತಿದ್ದರು. ಈ ತನಿಖಾ ಸಮಿತಿ ಕಾನೂನುಬಾಹಿರ ಎಂದು ಮುಂಬೈ ಹೈಕೋರ್ಟ್ ಕೂಡ ತೀರ್ಪು ನೀಡಿತು.

ಬಿಸಿಸಿಐ ಮತ್ತು ಬಿಹಾರ ಕ್ರಿಕೆಟ್ ಸಂಸ್ಥೆ ಎರಡೂ ಸುಪ್ರೀಂಕೋರ್ಟ್‌ನಲ್ಲಿ  ಈ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದವು. ಮುಂಬೈ ಹೈಕೋರ್ಟ್ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಲು ಹೊಸ ವ್ಯವಸ್ಥೆಗೆ ಸಲಹೆ ನೀಡಬೇಕಿತ್ತೆಂದು ಸಿಎಬಿ ವಾದಿಸಿತ್ತು. ಸುಪ್ರೀಂಕೋರ್ಟ್ ನಂತರ ಮೂವರು ಸದಸ್ಯರ ಮುದ್ಗಲ್ ಸಮಿತಿಯನ್ನು ನೇಮಕ ಮಾಡಿತು.ಮುದ್ಗಲ್ ಸಮಿತಿಯು ಮೈಯಪ್ಪನ್ ಮತ್ತು ರಾಜ್ ಕುಂದ್ರಾ ಅವರನ್ನು ಬೆಟ್ಟಿಂಗ್ ಮತ್ತು ಮಾಹಿತಿ ಹಂಚಿಕೆಗಾಗಿ ದೋಷಿಗಳನ್ನಾಗಿ ಮಾಡಿತು.

ಶ್ರೀನಿವಾಸನ್ ಮತ್ತು ಐಪಿಎಲ್ ಸಿಒಒ ಸುಂದರ್ ರಾಮನ್ ವಿರುದ್ಧ ಕೂಡ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದ ಬಗ್ಗೆ ಟೀಕಿಸಿತ್ತು. ವಿಚಾರಣೆಯ ನಂತರ ಅಂತಿಮವಾಗಿ ಬಿಸಿಸಿಐ ಮುಖ್ಯಸ್ಥ ಶ್ರೀನಿವಾಸನ್ ಅವರನ್ನು ಮಂಡಳಿ ವ್ಯವಹಾರಗಳಿಂದ ಅಮಾನತುಗೊಳಿಸಲಾಯಿತು.

ಸುಪ್ರೀಂಕೋರ್ಟ್ ಇಲ್ಲಿವರೆಗೆ ಶ್ರೀನಿವಾಸನ್ ಸ್ವಯಂ ಹಿತಾಸಕ್ತಿಯೊಂದಿಗೆ ಭಾರತದಲ್ಲಿ ಕ್ರಿಕೆಟ್ ನಿರ್ವಹಿಸುವ ರೀತಿಯನ್ನು ಟೀಕಿಸಿತು. ಹಿತಾಸಕ್ತಿ ಸಂಘರ್ಷ ನಿಭಾಯಿಸಲು ಮಂಡಳಿಯಲ್ಲಿ ಯಾವುದೇ ಪ್ರಕ್ರಿಯೆ ಇರಲಿಲ್ಲ ಎಂದು ನ್ಯಾಯಮೂರ್ತಿ ಕಲೀಫುಲ್ಲಾ ಅಭಿಪ್ರಾಯಪಟ್ಟರು. ಹಿತಾಸಕ್ತಿ ಸಂಘರ್ಷ ಆಳವಾಗಿ ಬೇರುಬಿಟ್ಟಿದೆ. ನೀವು ಕ್ರಿಕೆಟ್‌ಗೆ ಉತ್ತಮ ಸೇವೆ ಸಲ್ಲಿಸಿದ್ದೀರಾ, ಆದರೆ ಅಂತಿಮವಾಗಿ ನಿಮ್ಮ ವರ್ಚಸ್ಸಿಗೆ ಕಳಂಕ ಉಂಟಾಗಿದೆ ಎಂದೂ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. 

ವೆಬ್ದುನಿಯಾವನ್ನು ಓದಿ