ಕೊಹ್ಲಿ ಕೆಟ್ಟಫಾರಂನಿಂದ ಹೊರಬರಲು ತೆಂಡೂಲ್ಕರ್ ನೆರವು

ಶನಿವಾರ, 20 ಸೆಪ್ಟಂಬರ್ 2014 (18:14 IST)
ಸುದೀರ್ಘ ಕಾಲದಿಂದ ಕೆಟ್ಟ ಫಾರಂನಲ್ಲಿದ್ದು ಫಾರಂ ಗಳಿಸಲು ತಿಣುಕಾಡುತ್ತಿರುವ ವಿರಾಟ್ ಕೊಹ್ಲಿ ತುರ್ತು ನೆರವು ನೀಡುವಂತೆ ಸಚಿನ್ ತೆಂಡೂಲ್ಕರ್  ಮೊರೆ ಹೋಗಿದ್ದಾರೆ. ಇತ್ತೀಚಿನ ಪ್ರವಾಸದಲ್ಲಿ ಇಂಗ್ಲೆಂಡ್ ವಿರುದ್ಧ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 134 ರನ್‌ಗಳೊಂದಿಗೆ ಕಳಪೆ ಪ್ರದರ್ಶನ ನೀಡಿದ ಕೊಹ್ಲಿ ಈಗ ತೆಂಡೂಲ್ಕರ್ ಹದ್ದಿನ ಕಣ್ಣಿನಡಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ.
 
ತಾನು ಕ್ರಿಕೆಟ್  ಆಟಗಾರನಾಗಲು ತೆಂಡೂಲ್ಕರ್ ಸ್ಫೂರ್ತಿ ಎಂದು ಸದಾ ಹೇಳುತ್ತಿದ್ದ ಕೊಹ್ಲಿ ತನ್ನ ದೋಷಪೂರಿತ ಬ್ಯಾಟಿಂಗ್ ಮತ್ತು ಕೆಟ್ಟ ಫಾರಂನಿಂದ ಹೊರಬರಲು ಸಹಾಯಮಾಡುವಂತೆ ದಂತಕತೆ ಬ್ಯಾಟ್ಸ್‌ಮನ್‌ಗೆ  ಯಾಚಿಸಿದ್ದಾರೆ.  ಕೊಹ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯ ಒಳಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದು, ತೆಂಡೂಲ್ಕರ್  ಅವರ ಪಕ್ಕದಲ್ಲೇ ಇರುತ್ತಾರೆ. ಕೊಹ್ಲಿಗೆ ಆಗಾಗ್ಗೆ ಸಲಹೆಗಳನ್ನು ನೀಡುತ್ತಾ ಬ್ಯಾಟಿಂಗ್ ಶೈಲಿಯನ್ನು ತಿದ್ದುತ್ತಿದ್ದಾರೆ.  

ಕೊಹ್ಲಿ ಮೈದಾನದಲ್ಲಿ ಆಡುವ ಆಟದ ವೈಖರಿ ಕುರಿತು ಟೀಕಾಪ್ರವಾಹಕ್ಕೆ ಗುರಿಯಾಗಿದ್ದಲ್ಲದೇ, ಬಾಲಿವುಡ್ ನಟಿ, ಗೆಳತಿ ಅನುಷ್ಕಾ ಶರ್ಮಾಳನ್ನು ಇಂಗ್ಲೆಂಡ್ ಪ್ರವಾಸ ಕಾಲದಲ್ಲಿ ತನ್ನ  ಪಕ್ಕದಲ್ಲೇ, ಹೋದಕಡೆಯಲ್ಲೆಲ್ಲಾ  ಇರಿಸಿಕೊಂಡಿದ್ದಕ್ಕೆ ಟೀಕೆಗೆ ಗುರಿಯಾದರು. ಅನುಷ್ಕಾ ಇಂಗ್ಲೆಂಡ್‌ನಿಂದ ನಿರ್ಗಮಿಸಿದರೂ ಕೊಹ್ಲಿ ಕೆಟ್ಟ ಫಾರಂ ಹಾಗೇ ಮುಂದುವರಿಯಿತು. ಈ ಹತಾಶಸ್ಥಿತಿಯಿಂದ ಹೊರಬರುವುದಕ್ಕಾಗಿಯೇ ಕೊಹ್ಲಿ ಸಮರ್ಥ ಗುರು ತೆಂಡೂಲ್ಕರ್ ಮೊರೆ ಹೋಗಿದ್ದು, ಏಕದಿನ ಪಂದ್ಯಗಳಲ್ಲಿ 18,426 ರನ್, ಟೆಸ್ಟ್‌ಗಳಲ್ಲಿ 15, 921 ರನ್ ಬಾರಿಸಿದ ತೆಂಡೂಲ್ಕರ್  ಕೊಹ್ಲಿ  ಖಂಡಿತವಾಗಿ ಫಾರಂಗೆ ಮರಳಲು ನೆರವಾಗಬಹುದು. 

ವೆಬ್ದುನಿಯಾವನ್ನು ಓದಿ