ಕಾಮಾಂಗನೆಯರ ಮೋಹಪಾಶಕ್ಕೆ ಆಟಗಾರರನ್ನು ಸಿಕ್ಕಿಸುವ ಸಂಚು

ಗುರುವಾರ, 11 ಸೆಪ್ಟಂಬರ್ 2014 (19:54 IST)
ಕ್ರಿಕೆಟ್ ಆಟದಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರದ ವಿವಾದವು ಆಗಾಗ್ಗೆ ಸದ್ದುಮಾಡುತ್ತದೆ. ಫಿಕ್ಸಿಂಗ್ ಮತ್ತು ಹೊಸ ವಿದ್ಯಮಾನವಾದ ಸ್ಪಾಟ್ ಫಿಕ್ಸಿಂಗ್ ಮುಂತಾದ ಕಳ್ಳಾಟಗಳು ಆಗಾಗ್ಗೆ ಹೊರಹೊಮ್ಮಿ ಸಂಭಾವಿತರ ಆಟಕ್ಕೆ ಕಳಂಕ ಹಚ್ಚುತ್ತದೆ.  ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್‌ನ ದೊಡ್ಡ ಸಡಗರವಾದ ಐಸಿಸಿ ಕ್ರಿಕೆಟ್ ವಿಶ್ವಕಪ್ ಮುಂದಿನ ವರ್ಷ ನಡೆಯಲಿದ್ದು,  ನ್ಯೂಜಿಲೆಂಡ್ ಪೊಲೀಸರು ಈ ಕ್ರಿಕೆಟ್ ಪಂದ್ಯಾವಳಿಗೆ ಉಂಟಾಗುವ ಇನ್ನೊಂದು ಸಂಭವನೀಯ ಬೆದರಿಕೆಯನ್ನು ಬಯಲು ಮಾಡಿದ್ದಾರೆ.

ಪಂದ್ಯಾವಳಿಯ ಸಂದರ್ಭದಲ್ಲಿ ಭೂಗತಲೋಕದ ಕ್ರಿಮಿನಲ್‌ಗಳು  ಕಾಮಾಂಗನೆಯರ ಮೋಹಪಾಶವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಯೋಜಿಸಿದ್ದಾರೆಂದು ವಿಶ್ವ ಕಪ್ ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ.  ಲಲನಾಂಗಿಯರು ಆಟಗಾರರ ಮೇಲೆ ಮೋಹಪಾಶ ಬೀರಿ ನಂತರ ಆಟಗಾರರ ಕಾಮಪ್ರಚೋದಕ ಭಂಗಿಯಲ್ಲಿರುವ ಚಿತ್ರಗಳನ್ನು ಪಡೆದು ಅವರ ಬ್ಲಾಕ್‌ಮೇಲ್‌ಗೆ ಮ್ಯಾಚ್‌ಫಿಕ್ಸರುಗಳು ಯತ್ನಿಸಬಹುದೆಂದು ವರದಿಯಲ್ಲಿ ತಿಳಿಸಲಾಗಿದೆ. ವಿಶ್ವಕಪ್ ಪಂದ್ಯಾವಳಿಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆಯೋಜಿಸಿದ್ದು, ನ್ಯೂಜಿಲೆಂಡ್ ಪೊಲೀಸರು ಇಂತಹ ಬೆದರಿಕೆಗಳ ಬಗ್ಗೆ ಕಟ್ಟೆಚ್ಚರ ವಹಿಸಿದ್ದಾರೆ.

ಭೂಗತ ಪಾತಕಿಗಳು ಆಟಗಾರರನ್ನು ಮೋಹಪಾಶದಲ್ಲಿ ಸಿಕ್ಕಿಸಲು ಮಹಿಳೆಯರನ್ನು ಕರೆತರುತ್ತಾರೆ. ನಂತರ ಆಟಗಾರರ ಇಚ್ಛೆಗೆ ವಿರುದ್ಧವಾಗಿ ಫಿಕ್ಸಿಂಗ್ ಮಾಡುವಂತೆ ಬಲವಂತ ಮಾಡುತ್ತಾರೆ. ಅವರು ನಿರಾಕರಿಸಿದಾಗ, ಕಾಮಭಂಗಿಯ ಚಿತ್ರಗಳನ್ನು ನಿಮ್ಮ ಪತ್ನಿಗೆ, ಪೋಷಕರಿಗೆ ಕಳಿಸುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ವಿಶ್ವಕಪ್ ಕ್ರಿಕೆಟ್‌ಗೆ ನಿಯೋಜಿಸಿರುವ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.  

ಮ್ಯಾಚ್ ಫಿಕ್ಸಿಂಗ್‌ನಲ್ಲಿ ಮಿಲಿಯಾಂತರ ಡಾಲರ್‌ಗಳನ್ನು ಪಣಕ್ಕೆ ಒಡ್ಡಲಾಗುತ್ತದೆ.  ಕ್ರಿಕೆಟ್ ಮಂಡಳಿಯ ಕಟ್ಟೆಚ್ಚರದ ನಡುವೆಯೂ ಅನೇಕ ಕ್ರಿಕೆಟ್ ಆಟಗಾರರು ಫಿಕ್ಸಿಂಗ್ ಆಪಾದನೆಗೆ ಗುರಿಯಾಗಿದ್ದರು. ನ್ಯೂಜಿಲೆಂಡ್ ಲೌ ವಿನ್ಸೆಂಟ್ ತಾನು ಫಿಕ್ಸಿಂಗ್ ವಂಚಕ ಎಂದು ಒಪ್ಪಿಕೊಂಡ ಬಳಿಕ ಇಂಗ್ಲಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೀವಾವಧಿ ನಿಷೇಧಕ್ಕೆ ಗುರಿಮಾಡಿದೆ. 2000ದಲ್ಲಿ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನೆ ಪಂದ್ಯಗಳಲ್ಲಿ ಫಿಕ್ಸಿಂಗ್ ಮಾಡಿದ್ದಾಗಿ ಒಪ್ಪಿಕೊಂಡಾಗ ಕ್ರಿಕೆಟ್ ಕ್ಷೇತ್ರದ ಅತಿ ದೊಡ್ಡ ಮ್ಯಾಚ್ ಫಿಕ್ಸಿಂಗ್ ಹಗರಣವು ಬಯಲಾಗಿತ್ತು. 

ವೆಬ್ದುನಿಯಾವನ್ನು ಓದಿ