ಮುಂದಿನ ಚುನಾವಣೆಯಲ್ಲಿ ದಾದಾ ಮತ್ತು ದೀದೀ ಮಧ್ಯೆ ಹಣಾಹಣಿ?

ಗುರುವಾರ, 22 ಜನವರಿ 2015 (16:00 IST)
ಮುಂಬರುವ ವಿಧಾನಸಭೆ ಚುನಾವಣೆ ಕಣ ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಧ್ಯೆ ಹಣಾಹಣಿ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ.
 
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಬಿಜೆಪಿ ಹೈಕಮಾಂಡ್‌ ನಾಯಕರ ನಡುವಿನ ಬಿಜೆಪಿ ಸೇರ್ಪಡೆ ಕುರಿತಂತೆ ಮಾತುಕತೆಗಳು ಅಂತಿಮ ಘಟ್ಟಕ್ಕೆ ತಲುಪಿವೆ ಎನ್ನಲಾಗಿದೆ.  
 
ಕಳೆದ ಕೆಲ ತಿಂಗಳುಗಳಿಂದ ಶಾರದಾ ಚಿಟ್ ಫಂಡ್ ಕೇಸ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಆಕ್ರಮಣಕಾರಿ ವರ್ತನೆ ತೋರುತ್ತಿರುವ ಬಿಜೆಪಿ, ಮತ್ತೊಂದೆಡೆ ಸೌರವ್ ಗಂಗೂಲಿಯನ್ನು ಬಿಜೆಪಿ ಖೆಡ್ಡಾಗೆ ಕೆಡುವಲು ರಣತಂತ್ರ ರೂಪಿಸಿದೆ. 
 
ಪಶ್ಚಿಮ ಬಂಗಾಳದ ಯುವರಾಜ 42 ವರ್ಷ ವಯಸ್ಸಿನ ಸೌರವ್ ಗಂಗೂಲಿ, ಒಂದು ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಲಿದೆ. ಇದರಿಂದ ಮಮತಾಗೆ ಬಲವಾದ ಹೊಡೆತ ನೀಡಲು ಅಮಿತ್ ಶಾ ತಂಡ ಚಿಂತನೆಯಲ್ಲಿ ತೊಡಗಿದೆ. 
 
ಕಳೆದ 2008ರಲ್ಲಿ ಕ್ರಿಕೆಟ್‌ಗೆ ಗುಡ್‌‍ಬೈ ಹೇಳಿದ್ದ ಗಂಗೂಲಿಗೆ ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳು ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದವು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಕೂಡಾ ಆಮಿಷವೊಡ್ಡಿತ್ತು. ಒಂದು ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಕೇಂದ್ರ ಕ್ರೀಡಾ ಸಚಿವರಾಗಿ ಮೋದಿ ನೇಮಿಸಲಿದ್ದಾರೆ ಎನ್ನುವ ಉಹಾಪೋಹಗಳು ಹರಡಿವೆ.
 
ಬಿಜೆಪಿ ಪಕ್ಷದ ಹೈಕಮಾಂಡ್‌ ನಾಯಕರು ನನಗೆ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದು ನಿಜ. ಆದರೆ, ನಾನು ತಳ್ಳಿಹಾಕಿದ್ದೇನೆ. ನಾನು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ