ಕನ್ನಡದ ನೆಲದಿಂದ ಭಾರತೀಯ ತಂಡಕ್ಕೆ ಮತ್ತೊಬ್ಬ ಶ್ರೀನಾಥ್!

ಗುರುವಾರ, 29 ಸೆಪ್ಟಂಬರ್ 2011 (16:52 IST)
PR
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿನ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಕರ್ನಾಟಕದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಯಶಸ್ವಿಯಾಗಿದ್ದಾರೆ.

ದೇಶಿಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ನೀಡಿರುವ ಅಮೋಘ ಪ್ರದರ್ಶನದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಬೆಂಗಳೂರಿನ ಈ ವೇಗಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಅಭಿಮನ್ಯು ಮಿಥುನ್, ವಿನಯ್ ಕುಮಾರ್ ನಂತರ ಇದೀಗ ಅರವಿಂದ್ ಸಹ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ತಮಗೆ ಲಭಿಸಿದ ಕೆಲವೇ ಕೆಲವು ಅವಕಾಶವನ್ನು ಸದುಪಯೋಗಪಡಿಸುವಲ್ಲಿ ಮಿಥುನ್ ಹಾಗೂ ವಿನಯ್ ವಿಫಲವಾಗಿದ್ದರು. ಹೀಗಿರುವಾಗ ಕರ್ನಾಟಕದ ಮತ್ತೊಬ್ಬ ವೇಗಿಗೆ ಅವಕಾಶ ಲಭಿಸಿರುವುದು ಅದೃಷ್ಟ ಎಂದೇ ಪರಿಗಣಿಸಲಾಗುತ್ತಿದೆ. ಕರ್ನಾಟಕದ ರಣಜಿ ತಂಡದ ತ್ರಿವಳಿ ವೇಗಿಗಳು ಎಂದೇ ಖ್ಯಾತಿ ಪಡೆದಿದ್ದ ಈ ಮೂವರು ವೇಗಿಗಳು ರಾಜ್ಯ ಕ್ರಿಕೆಟ್‌ಗಾಗಿ ಅನೇಕ ಕೊಡುಗೆಗಳನ್ನು ಸಲ್ಲಿಸಿದ್ದಾರೆ.

2010-11ರ ರಣಜಿ ಅವಧಿಯಲ್ಲಿ ಕರ್ನಾಟಕ ಪರ ಅಮೋಘ ದಾಳಿ ಸಂಘಟಿಸಿದ್ದ ಅರವಿಂದ್ 26 ವಿಕೆಟುಗಳನ್ನು ಕಬಳಿಸಿದ್ದರು. ಆ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಕರ್ನಾಟಕದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅದೇ ವರ್ಷ ನಡೆದ ದುಲೀಪ್ ಟ್ರೋಫಿನಲ್ಲೂ 10 ವಿಕೆಟ್ ಕಬಳಿಸಿದ್ದ ಅರವಿಂದ್ ದಕ್ಷಿಣ ವಲಯ ಪರ ಅತಿ ಹೆಚ್ಚು ಪಡೆದವರ ಪರ ಎರಡನೇ ಬೌಲರ್ ಎನಿಸಿದ್ದರು.

ಇದಾದ ಬೆನ್ನಲ್ಲೇ ಕಳೆದ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಅರವಿಂದ್ ಪಾತ್ರರಾಗಿದ್ದರು. ತಾವು ಆಡಿದ 13 ಪಂದ್ಯಗಳಲ್ಲಿ ಅರವಿಂದ್ 21 ವಿಕೆಟುಗಳನ್ನು ಕಬಳಿಸಿದ್ದರು.

27ರ ಹರೆಯದ ಈ ಬೆಂಗಳೂರು ವೇಗಿ ಸ್ವಲ್ಪ ತಡವಾಗಿಯಾದರೂ ಟೀಮ್ ಇಂಡಿಯಾದ ಬಾಗಿಲು ತಟ್ಟುವಲ್ಲಿ ಯಶಸ್ವಿಯಾಗಿರುವುದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ತಮ್ಮ ನಿಖರ ದಾಳಿಯಿಂದಲೇ ಬ್ಯಾಟ್ಸ್‌ಮನ್‌ಗಳನ್ನು ಪೇಚಿಗೆ ಸಿಲುಕಿಸುವ ಕೌಶಲ್ಯ ಹೊಂದಿರುವ ಅರವಿಂದ್, ಇನ್ನೊಬ್ಬ ಜಾಗವಲ್ ಶ್ರೀನಾಥ್ ಅಥವಾ ವೆಂಕೆಟೇಶ್ ಪ್ರಸಾದ್ ರೀತಿಯಲ್ಲಿಯೇ ಟೀಮ್ ಇಂಡಿಯಾದಲ್ಲಿ ಸುದೀರ್ಘ ಕಾಲ ಆಡುತ್ತಾ ಅನೇಕ ಸಾಧನೆಗಳನ್ನು ಬರೆಯಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

ಶ್ರೀನಾಥ್ ಅರವಿಂದ್ ಪ್ರೊಫೈಲ್ ವೀಕ್ಷಣೆಗಾಗಿ ಮುಂದಿನ ಪುಟ ಕ್ಲಿಕ್ಕಿಸಿ...


PR


ಪೂರ್ಣ ಹೆಸರು: ಶ್ರೀನಾಥ್ ಅರವಿಂದ್
ಜನನ: ಎಪ್ರಿಲ್ 8, 1984, ಬೆಂಗಳೂರು
ಪ್ರಮುಖ ತಂಡಗಳು: ಭಾರತ, ಕರ್ನಾಟಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮಂಗಳೂರು ಯುನೈಟೆಡ್
ಪಾತ್ರ: ಬೌಲರ್
ಬೌಲಿಂಗ್ ಶೈಲಿ: ಎಡಗೈ ಮಧ್ಯಮ ಗತಿಯ ವೇಗಿ
ಬ್ಯಾಟಿಂಗ್ ಶೈಲಿ: ಎಡಗೈ ಬ್ಯಾಟಿಂಗ್

ಬೌಲಿಂಗ್ ಸಾಧನೆ:
ಪ್ರಥಮ ದರ್ಜೆ: ಪಂದ್ಯ- 20, ವಿಕೆಟ್- 68, ಅತ್ಯುತ್ತಮ ಬೌಲಿಂಗ್- 5/49, ಬೌಲಿಂಗ್ ಸರಾಸರಿ- 27.11, ಎಕಾನಮಿ- 3.00, 5 ವಿಕೆಟ್- 1, ನಾಲ್ಕು ವಿಕೆಟ್- 3
ಟ್ವೆಂಟಿ-20: ಪಂದ್ಯ- 28, ವಿಕೆಟ್- 37, ಅತ್ಯುತ್ತಮ ಬೌಲಿಂಗ್- 4/14, ಬೌಲಿಂಗ್ ಸರಾಸರಿ- 1802, ಎಕಾನಮಿ- 7.28, ನಾಲ್ಕು ವಿಕೆಟ್- 2

ಬ್ಯಾಟಿಂಗ್ ಸಾಧನೆ:
ಪ್ರಥಮ ದರ್ಜೆ: ಪಂದ್ಯ- 20, ಅಜೇಯ- 11, ರನ್- 136, ಗರಿಷ್ಠ- 33, ಸರಾಸರಿ- 11.33, ಕ್ಯಾಚ್- 5
ಟ್ವೆಂಟಿ-20: ಪಂದ್ಯ- 28, ಅಜೇಯ- 3, ರನ್- 20, ಗರಿಷ್ಠ- 11*, ಕ್ಯಾಚ್- 10

ಪ್ರಥಮ ದರ್ಜೆ ಡೆಬ್ಯುಟ್: ಮುಂಬೈನಲ್ಲಿ ಸೌರಾಷ್ಟ್ರ ವಿರುದ್ಧ 26 ಡಿಸೆಂಬರ್ 2008
ಟ್ವೆಂಟಿ-20 ಡೆಬ್ಯುಟ್: ವಿಶಾಖಪಟ್ಟಣದಲ್ಲಿ ಕೇರಳ ವಿರುದ್ಧ 3 ಎಪ್ರಿಲ್ 2007

ವೆಬ್ದುನಿಯಾವನ್ನು ಓದಿ