ಇಂಗ್ಲೆಂಡ್ ತಂಡವಾಯ್ತು, ಕೆವಿನ್ ಪೀಟರ್ಸನ್ ಗೆ ಇನ್ನು ದ. ಆಫ್ರಿಕಾ ಪರ ಆಡುವಾಸೆ!
ಶುಕ್ರವಾರ, 21 ಜುಲೈ 2017 (08:51 IST)
ಲಂಡನ್: 2013 ರ ಆಶಸ್ ಟೆಸ್ಟ್ ಸರಣಿ ಹೀನಾಯ ಸೋಲಿನ ನಂತರ ಇಂಗ್ಲೆಂಡ್ ತಂಡದಿಂದ ಹೊರದಬ್ಬಲ್ಪಟ್ಟ ಕೆವಿನ್ ಪೀಟರ್ಸನ್ ಗೆ ಈಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವಾಸೆಯಾಗಿದೆ. ಆದರೆ ಇಂಗ್ಲೆಂಡ್ ತಂಡದ ಪರವಾಗಿ ಅಲ್ಲ. ದ. ಆಫ್ರಿಕಾ ತಂಡದ ಪರವಾಗಿ.
ಪೀಟರ್ಸನ್ ಮೂಲತಃ ದ. ಆಫ್ರಿಕಾದವರೇ. ಆದರೆ ಅವರು ಕ್ರಿಕೆಟ್ ವೃತ್ತಿ ಬದುಕು ಕಟ್ಟಿಕೊಂಡಿದ್ದು ಇಂಗ್ಲೆಂಡ್ ತಂಡದಲ್ಲಿ. ಹೆಸರು, ಹಣ ಗಳಿಸಿದ್ದೂ ಇಂಗ್ಲೆಂಡ್ ತಂಡದಿಂದ. ಆದರೆ ಆ ಒಂದು ಆಶಸ್ ಸೋಲಿನ ನಂತರ ಮೂಲೆಗುಂಪಾದ ಪೀಟರ್ಸನ್ ನಂತರ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಲೇ ಇಲ್ಲ.
ಒಮ್ಮೆ ನಿವೃತ್ತಿ ಘೋಷಿಸಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವೆನೆಂದು ಘೋಷಿಸಿದ್ದ ಪೀಟರ್ಸನ್ ಇನ್ನು ದ. ಆಫ್ರಿಕಾ ಪರ ಆಡಬೇಕೆಂದರೆ, ಇನ್ನೂ ಎರಡು ವರ್ಷ ಕಾಯಬೇಕು. ಈಗಾಗಲೇ 37 ವರ್ಷ ದಾಟಿರುವ ಪೀಟರ್ಸನ್ ಆಫ್ರಿಕಾ ಪರ ಆಡಲು ಅರ್ಹತೆ ಪಡೆಯುವ ಹೊತ್ತಿಗೆ 40 ವರ್ಷವಾಗಿರುತ್ತದೆ. ಆದರೇನಂತೆ? ಇನ್ನೂ ಎರಡು ವರ್ಷದಲ್ಲಿ ಏನು ಬೇಕಾದರೂ ಆಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರಿನ ಮಾಜಿ ಆಟಗಾರ.